ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ಕರೆ

ಕೋಲಾರ,ನ,೫- ಫಲಾನುಭವಿಗಳು ಸ್ವಂತ ಉದ್ಯೋಗದಲ್ಲಿ ಕೌಶಲ್ಯವನ್ನು ಅಳವಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ವೃತ್ತಿಯನ್ನು ಉನ್ನತೀಕರಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ಹೇಳಿದರು.
ನಗರದ ಕ್ಲಾಕ್‌ಟವರ್ ಸಮೀಪದ ಸರ್ಕಾರಿ ಟೂಲ್‌ರೂಂನಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರೀಕರಣ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿ, ಜಿಲ್ಲಾ ಉದ್ಯಮ ಕೇಂದ್ರದ ಯೋಜನೆಯಲ್ಲಿ ಸ್ವಯಂ ಉದ್ಯೋಗಕ್ಕೆ ನೆರವಾಗುವ ಸಲುವಾಗಿ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಕಳೆದ ತಿಂಗಳು ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತವಾಗಿ ಸ್ಟಿಚ್ಚಿಂಗ್ ಮೆಷಿನ್ ನೀಡಲಾಗಿದ್ದು ಇದೀಗ ಗಾರೆ, ಬಡಗಿ, ಕುಲುಮೆ, ಕ್ಷೌರಿಕ, ದೋಬಿ ಮತ್ತು ಕಲ್ಲುಕುಟಿಕರಿಗೆ ಸಾಂಪ್ರದಾಯಿಕ ವೃತ್ತಿಗೆ ಬೇಕಾದ ಆಧುನಿಕ ಸಲಕರಣೆಗಳನ್ನು ನೀಡಲಾಗುತ್ತಿದ್ದು ಸೌಲಭ್ಯಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗಿಗಳಾಗುವ ಮೂಲಕ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕೆಂದು ತಿಳಿಸಿದರು.
ಕೈಗಾರಿಕಾ ವಿಸ್ತರಣಾಧಿಕಾರಿ ಎಸ್.ಎಂ.ಗೀತಾ ಮಾತನಾಡಿ, ಜಿಲ್ಲಾ ಪಂಚಾಯತಿ ಸದಸ್ಯರ ಮೂಲಕ ಫಲಾನುಭವಿಗಳಿಗೆ ಜಿಲ್ಲಾ ಉದ್ಯಮ ಕೇಂದ್ರದಿಂದ ಉಚಿತವಾಗಿ ಸುಧಾರಿತ ಉಪಕರಣಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ಹೂಹಳ್ಳಿ ವೆಂಕಟೇಶಪ್ಪ, ಗಂಗಾಪುರ ನಾಗರಾಜ ಇದ್ದರು.