ಜಿ.ಪಂ ಸಿಇಓ ರಾಹುಲ್ ಶಿಂಧೆ ಅವರಿಂದತಾಳಿಕೋಟೆ ತಾಲೂಕಿನ ಪಡೇಕನೂರ ಗ್ರಾಮದ ವಿವಿಧ ಕಾಮಗಾರಿಗಳ ಪರಿಶೀಲನೆ

ವಿಜಯಪುರ:ಜೂ.26: ಕರ್ನಾಟಕ ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚನೆ ನೀಡಿದ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡೆಕನೂರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಕೈಗೊಳ್ಳುತ್ತಿರುವ ದ್ರವ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳ ಪರಿಶೀಲನೆ ನಡೆಸಿದರು. ಚರಂಡಿ ನೀರು ಪಾಸಾಗಲು ಚಿಕ್ಕ ಪೈಪಗಳನ್ನು ಅಳವಡಿಸಲಾಗಿದ್ದು, ಚರಂಡಿ ನೀರು ಸರಾಗವಾಗಿ ಹೋಗಲು ದೊಡ್ಡ ಪೈಪ ಅಳವಡಿಸಬೇಕು. ಪ್ರಗತಿಯಲ್ಲಿರುವ ಸಮುದಾಯ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಯುಷ್ ಇಲಾಖೆಯ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂಧಿಗಳ ಹಾಜರಾತಿ,. ಆಸ್ಪತ್ರೆಗೆ ಬರುವ ಹೊರ ರೋಗಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಸ್ವಚ್ಚತೆಯ ಕುರಿತು ಅರಿವು ಮೂಡಿಸಬೇಕು. ಆಯುಷ್ ಇಲಾಖೆಯಿಂದ ಗ್ರಾಮದಲ್ಲಿ ಕರಪತ್ರ ಹಂಚುವ ಮೂಲಕ, ಗೋಡೆ ಬರಹಗಳನ್ನು ಬರೆಸುವ ಮೂಲಕ ಜಾಗೃತಿ ಮೂಡಿಸಬೇಕು. ಆಯುರ್ವೇದ ಇಲಾಖೆಯಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು ತಾತ್ಕಾಲಿಕವಾಗಿ ಆರೋಗ್ಯ ಇಲಾಖೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಅಲ್ಲಿಯೇ ನಡೆಸುವಂತೆ ಸ್ಥಳದಲ್ಲಿದ್ದ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಮತ್ತು ಸಿಬ್ಬಂದಿಗಳ ಹಾಜರಾತಿ, ಅಂಗನವಾಡಿ ಉಗ್ರಾಣ ಕೋಣೆ, ದಾಸ್ತಾನು ವಿವರ ಪಡೆದುಕೊಂಡ ಅವರು, 15 ದಿನಗಳಿಗೊಮ್ಮೆ ಕಡ್ಡಾಯವಾಗಿ ದಾಸ್ತಾನು ಸರಬರಾಜಾಗಬೇಕು. ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳಲ್ಲಿ ಯಾವದೇ ಕಾರಣಕ್ಕೂ ಲೋಪವಾಗಬಾರದೆಂದು ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಗಮನಿಸಿದ ಸಿಇಒ ರವರು ರಸ್ತೆ ಪಕ್ಕದ ಮನೆಗಳಿಗೆ ಭೇಟಿ ನೀಡಿ, ಮನೆಯ ನೀರನ್ನು ರಸ್ತೆಗೆ ಬಿಡಬೇಡಿ, ಗ್ರಾಮ ಪಂಚಾಯತಿಯಿಂದ ನರೇಗಾ ಯೋಜನೆಯಡಿ ನಿಮಗೆ ಇಂಗು ಗುಂಡಿ ಮಾಡಿಕೊಳ್ಳಲು ಅವಕಾಶವಿದ್ದು ಅದರ ಲಾಭ ಪಡೆದುಕೊಂಡು ಇಂಗು ಗುಂಡಿ ನಿರ್ಮಿಸಿಕೊಳ್ಳಿ, ಆರೋಗ್ಯಯುತ ಜೀವನಕ್ಕಾಗಿ ಸ್ವಚ್ಛತೆ ಅತಿಮುಖ್ಯವಾಗಿದ್ದು, ಗ್ರಾಮದವರು ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸಬೇಕು. ಇದರೊಂದಿಗೆ ಅಕ್ಕ-ಪಕ್ಕದ ಮನೆಯವರು ಶೌಚಾಲಯ ಬಳಸುವಂತೆ ಪ್ರೇರೇಪಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಇನ್ನೂ 130 ಮನೆಗಳಿಗೆ ಶೌಚಾಲಯ ನಿರ್ಮಿಸಬೇಕಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಗಮನಕ್ಕೆ ತಂದಾಗ, ತಕ್ಷಣವೇ ಎಲ್ಲ 130 ಮನೆಗಳಿಗೆ ಭೇಟಿ ನೀಡಿ, ತುರ್ತಾಗಿ ಶೌಚಾಲಯ ನಿರ್ಮಿಸುವಂತೆ ಮನವರಿಕೆ ಮಾಡಿ, ಸ್ವಚ್ಛ ಭಾರತ ಅಭಿಯಾನದಡಿ ಅವರಿಗೆ ಸಹಾಯ ಧನ ನೀಡಲು ಕ್ರಮ ಕೈಗೊಳ್ಳಬೇಕು. ಸ್ಥಳಾವಕಾಶ ಇಲ್ಲದಿದ್ದ ಪಕ್ಷದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಿ ಜನರಿಗೆ ಶೌಚಾಲಯ ಬಳಕೆಗೆ ಒದಗಿಸುವಂತೆ ಸೂಚಿಸಿದ ಅವರು, ಗ್ರಾಮದಲ್ಲಿರುವ ವಿವಿಧ ಇಲಾಖೆಗಳ ಸರಕಾರಿ ನೌಕರರು ಶೌಚಾಲಯ ಬಳಸದೇ ಇದ್ದಲ್ಲಿ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ಗ್ರಾಮದ ಸರಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಹಾಜರಾತಿ ಸೇರಿ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮೈದಾನ ಅಭಿವೃದ್ಧಿ ಪಡಿಸಲಾಗಿದ್ದು, ಸರಿಯಾಗಿ ನಿರ್ವಹಣೆ ಮಾಡಬೇಕು. ಗ್ರಾಮ ಪಂಚಾಯತಿ ಸದಸ್ಯರಿಗೆ ಮೈದಾನ ಲಾಭ ಪಡೆದುಕೊಳ್ಳಿ, ಸಾಯಂಕಾಲ ಗ್ರಾಮದ ಹಿರಿಯ ನಾಗರಿಕರಿಗೆ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡಿ, ಇದರಿಂದ ಶಾಲೆಯು ಸ್ವಚ್ಚಂದವಾಗಿರುತ್ತದೆ ಎಂದು ಹೇಳಿದರು.
ಪ್ರಗತಿ ಪರಿಶೀಲನಾ ಸಭೆ: ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಅರಿವು ಕಾರ್ಯಕ್ರಮ, ಉಚಿತ ಆರೋಗ್ಯ ಶಿಬಿರ, ಬೀದಿ ನಾಟಕಗಳನ್ನು ಆಯೋಜನೆ ಮಾಡಬೇಕು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಶೀಘ್ರದಲ್ಲಿ ನಿಯಮಾನುಸಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಮುಖ್ಯವಾಗಿ ಅತಿಥಿ ಶಿಕ್ಷಕರು ಕಡ್ಡಾಯವಾಗಿ ಪ್ರತಿ ದಿನ ಶಾಲೆಗೆ ಬರುವಂತೆ ನೋಡಿಕೊಕೊಳ್ಳಬೇಕು. ಅತಿಥಿ ಶಿಕ್ಷಕರು ಅತಿಥಿಗಳಾಗಿರುವುದು ಬೇಡ, ಅವರು ಶಾಲೆಯ ಒಂದು ಭಾಗವಾಗಿದ್ದಾರೆ. ಎಲ್ಲ ಶಿಕ್ಷಕರು ಮಕ್ಕಳ ಮೂಲಕ ಪಾಲಕರಿಗೆ ಸ್ವಚ್ಛತೆಯ ಅರಿವು ಮೂಡಿಸಲು ಪ್ರಯತ್ನಿಸಿ, ಪ್ರತಿದಿನ ಮಕ್ಕಳಿಗೆ ಸ್ವಚ್ಚತೆಯ ಕುರಿತು ತಿಳುವಳಿಕೆ ನೀಡಿ ಮತ್ತು ಮಕ್ಕಳು ಅವರ ಪಾಲಕರಿಗೆ ಅರಿವು ಮೂಡಿಸುತ್ತಿರುವದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಅತ್ಯಂತ ಒಳ್ಳೆಯ ಗುಣಮಟ್ಟದಿಂದ ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜನರ ಅಭಿವೃದ್ಧಿಯ ದೃಷ್ಠಿಯಿಂದ ಮಾತ್ರ ಸರಕಾರ ವಿವಿಧ ಇಲಾಖೆಗಳನ್ನು ರಚನೆ ಮಾಡಿದೆ, ಆದರೆ ಎಲ್ಲರ ಗುರಿ ಮಾತ್ರ ಜನರ ಅಭಿವೃದ್ಧಿ ಮಾತ್ರ. ಹೀಗಾಗಿ, ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಸಭೆಯ ನಂತರ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಇಓ ರಾಹುಲ್ ಸಿಂಧೆ ಅವರು, ಎಲ್ಲ ಕಾರ್ಯಗಳನ್ನು ಗ್ರಾಮ ಪಂಚಾಯತಿಂದ ಮಾತ್ರ ಮಾಡಲಾಗುವದಿಲ್ಲ. ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿರುತ್ತದೆ. ಗ್ರಾಮಸ್ಥರು ಸಹ ಸಲಹೆ-ಸೂಚನೆಗಳನ್ನು ನೀಡಬೇಕು. ಅಧಿಕಾರಿಗಳು ಸಾರ್ವಜನಿಕರ ಜೊತೆ ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇನ್ನೂ ಶೌಚಾಲಯ ಕಟ್ಟಿಕೊಳ್ಳದೇ ಇರುವವರು ಪ್ರಥಮಾಧ್ಯತೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು. ಶೌಚಾಲಯ ನಿರ್ಮಿಸಿಕೊಂಡವರು ಕಡ್ಡಾಯ ಅದರ ಬಳಕೆ ಮಾಡಿಕೊಳ್ಳಬೇಕು. ಬಯಲಲ್ಲಿ ಬಹಿರ್ದೆಸೆಗೆ ಹೋದಾಗ ಹಲವಾರು ಅನಾಹುತಗಳು ಆಗಿರುವದನ್ನು ನಾವು ನೀವೆಲ್ಲ ಟಿವಿ, ಪೇಪರ್ ಮತ್ತು ಮೋಬೈಲ್ ಮೂಲಕ ಕೇಳಿದ್ದೇವೆ ಅದಕೊಸ್ಕರ ಅನಾಹುತಗಳು ಆಗುವ ಮುಂಚೆ ನಾವು ಜಾಗೃತ್ತರಾಗೋಣ ಶೌಚಾಲಯ ಬಳಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಲೋಕಾಯುಕ್ತ ಪೋಲಿಸ್ ಇನ್ಸಪೆಕ್ಟರ್ ಆನಂದ ದೋಣಿ, ಸಹಾಯಕ ಯೋಜನಾಧಿಕಾರಿಗಳಾದ ಅರುಣಕುಮಾರ ದಳವಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್.ಬಿರಾದಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನೀಲ ಕಿರಣಗಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರು, ಆರ್‍ಡಬ್ಲೂಎಸ್, ಪಿಆರ್‍ಇಡಿ, & ಕೆಆರ್‍ಐಡಿಎಲ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಇತರೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.