ಜಿ.ಪಂ. ಮಾಜಿ ಸದಸ್ಯ ಕೂಡಲಗಿ ಸಹೋದರನ ಹತ್ಯೆ ಪ್ರಕರಣ: ಮಾಜಿ ಶಾಸಕ ನರಿಬೋಳ್ ವಿರುದ್ಧ ಪ್ರಕರಣ ದಾಖಲು

ಕಲಬುರಗಿ,ಜೂ.10:ಜೇವರ್ಗಿ ತಾಲ್ಲೂಕಿನ ಬಳೂಂಡಗಿ ಗ್ರಾಮದ ಬಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಅವರ ಕಿರಿಯ ಸಹೋದರ ಹಣಮಂತ್ ಕೂಡಲಗಿ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಹಾಗೂ ಅವರ ಸಹೋದರ ಬಸವರಾಜ್ ಪಾಟೀಲ್ ನರಿಬೋಳ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹಣಮಂತ್ ಕೂಡಲಗಿ ಅವರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಒಟ್ಟು 30 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಹಾಗೂ ಬಸವರಾಜಪ್ಪಗೌಡ ಪಾಟೀಲ್ ನರಿಬೋಳ್ ಅವರು ಪ್ರಚೋದನೆ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಯಾದ ಹಣಮಂತ್ ಹಾಗೂ ಆತನ ಅಣ್ಣ ಶಾಂತಪ್ಪ ಕೂಡಲಗಿ ಜೇವರ್ಗಿ ತಾಲ್ಲೂಕಿನ ಮಯೂರ್ ಗ್ರಾಮದ ಬಿಜೆಪಿ ಮುಖಂಡ ಶಿವಲಿಂಗಪ್ಪ ಭಾವಿಕಟ್ಟಿ ಕೊಲೆ ಪ್ರಕರಣದಲ್ಲಿ ಕಳೆದ 2019ರಲ್ಲಿ ಜೈಲು ಸೇರಿದ್ದರು. ಅವರು ಕೆಲ ತಿಂಗಳು ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಕಳೆದ 7ರಂದು ಹಣಮಂತ್ ಕೂಡಲಗಿ ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಪ್ರಕರಣದಲ್ಲಿ ಮಯೂರ್ ಗ್ರಾಮದ ಸೋಮಲಿಂಗಪ್ಪ ಗೊಲ್ಲಾಳಪ್ಪ ಭಾವಿಕಟ್ಟಿ, ಮಹಾಲಿಂಗಪ್ಪ ಗೊಲ್ಲಾಳಪ್ಪ ಭಾವಿಕಟ್ಟಿ, ಭಾಜಿರಾಯ್ ಗೊಲ್ಲಾಳಪ್ಪ ಭಾವಿಕಟ್ಟಿ, ಗೋಪಾಲ್ ಗೊಲ್ಲಾಳಪ್ಪ ಭಾವಿಕಟ್ಟಿ, ಶಿವಪುತ್ರ ತಿಪ್ಪಣ್ಣ ಭಾವಿಕಟ್ಟಿ, ಗೌಡಪ್ಪಾ ಗೊಲ್ಲಾಳಪ್ಪ ಭಾವಿಕಟ್ಟಿ, ಸುನೀಲ್ ಭಾಜಿರಾಯ್ ಭಾವಿಕಟ್ಟಿ, ಶರಣಪ್ಪ ಶ್ರೀಮಂತ್ ಭಾವಿಕಟ್ಟಿ, ಖಾಜಪ್ಪ ಸದಾಶಿವ್ ಭಾವಿಕಟ್ಟಿ, ವಿಜಯಕುಮಾರ್ ಸದಾಶಿವ್ ಭಾವಿಕಟ್ಟಿ, ಉಮೇಶ್ ಅಶೋಕ್ ಭಾವಿಕಟ್ಟಿ, ಅನಿಲ್ ಭಾಜಿರಾಯ್ ಭಾವಿಕಟ್ಟಿ, ನಿಂಗಪ್ಪ ತಂದೆ ಅಯ್ಯಪ್ಪ ಕಾಂಬಳೆ, ಶ್ರೀಮತಿ ಸರೋಜನಿ ಗಂಡ ಶಿವಲಿಂಗಪ್ಪ ಭಾವಿಕಟ್ಟಿ, ಶ್ರೀಮತಿ ಗಿರಿಜವ್ವ ಗಂಡ ಗೊಲ್ಲಾಳಪ್ಪ ಭಾವಿಕಟ್ಟಿ, ಇಟಗಾದ ರವಿ ಕಟ್ಟಿ, ಪ್ರದೀಪ್ ಯಮನಪ್ಪ ಕಟ್ಟಿ, ಪ್ರತಾಪ್ ಚಿದಾನಂದ್ ಕಟ್ಟಿ, ಪ್ರೇಮ್ ಯಮನಪ್ಪ ಕಟ್ಟಿ, ಪ್ರಭುದೇವ್ ಬಾಬು ಕಟ್ಟಿ, ಪಟ್ಟಣದ ಶಿವು ಭಾವಿಕಟ್ಟಿ, ಷಣ್ಮುಖ್ ಗುರಪ್ಪ ಗೌನಳ್ಳಿ, ಲಕ್ಷ್ಮೀ ಚೌಕ್ ನಿವಾಸಿ ಬಸವರಾಜ್ ಗುರಣ್ಣಗೌಡ, ವಿದ್ಯಾನಗರದ ರಾಕೇಶ್, ಬೇಲೂರಿನ ಶಿವಮೂರ್ತಿ ಮಹಾಂತಪ್ಪ, ಕೂಡಲಗಿಯ ಮಲ್ಲಿನಾಥ್ ನಾಗಪ್ಪ ಕೂಡಲಗಿ, ಅರಳಗುಂಡಗಿಯ ದೇವಿಂದ್ರ ಸಿದ್ದಣ್ಣ ಸುಬಾನ್, ಆಲ್‍ಮೇಲ್‍ದ ಸುನೀಲ್ ಅವರು ಆರೋಪಿಗಳಾಗಿದ್ದಾರೆ