ಜಿ.ಪಂ.ಪೂರ್ವಭಾವಿ ಸಭೆ

ರಾಮದುರ್ಗ,ಸೆ16-: ಮಲಪ್ರಭಾ ಬಲದಂಡೆ ಕಾಲುವೆ ಶಿರಸಂಗಿ ಉಪವಿಭಾಗದ ವ್ಯಾಪ್ತಿಯ ಮುಳ್ಳೂರು, ಕಡ್ಲಿಕೊಪ್ಪ ಸೇರಿದಂತೆ ಆರು ಗ್ರಾಮಗಳ ಜನರ ಜಮೀನುಗಳಿಗೆ ನೀರು ತಲುಪುತ್ತಿಲ್ಲ ಮತ್ತು ಯಾವದೇ ದುರಸ್ಥಿ ಕಾರ್ಯ ನಡೆಯುತ್ತಿಲ್ಲ ಶಿರಸಂಗಿ ಉಪವಿಭಾಗದಲ್ಲಿ ಬರುವ ಗ್ರಾಮಗಳ ಕಾರ್ಯವನ್ನು ರಾಮದುರ್ಗ ವಿಭಾಗಕ್ಕೆ ವರ್ಗಾವಣೆಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ರೇಣಪ್ಪ ಸೋಮಗೊಂಡು ಹೇಳಿದರು.
ಮಂಗಳವಾರ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ಜಿಪಂ ಉಪಕಾರ್ಯದರ್ಶಿ ಡಿ. ಎಂ. ಜಕ್ಕಪ್ಪಗೋಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 7 ಗ್ರಾಮಗಳಿಗೆ ನೀರಾವರಿ ಇದ್ದು ಇಲ್ಲದಂತಾಗಿದೆ ಅಲ್ಲದೆ ಈ ಪ್ರದೇಶದ ಕಾಲುವೆ ರೀಪೆರಿ ಮತ್ತು ಹೂಳೆತ್ತಲು ಅನುದಾನವನ್ನು ಸವದತ್ತಿ ನೀರಾವರಿ ಇಲಾಖೆಯ ಅಧಿಕಾರಿಗಳು ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿನ ಸಮಸ್ಯೆಗಳ ಕುರಿತು ಯಾರಿಗೆ ಹೇಳುವುದು ಈ ಸಮಸ್ಯೆಗಳ ಪರಿಹಾರಕ್ಕೆ ಎಂಎಲ್‍ಬಿಸಿ ರಾಮದುರ್ಗಕ್ಕೆ ವರ್ಗಾವಣೆ ಮಾಡಬೇಕು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಆಹಾರ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಶಿಶು ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಉಸ್ತುವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜಹೂರ ಹಾಜಿ ಶಿಶು ಅಭಿವೃದ್ಧಿ ಅಧಿಕಾರಿ ಸಿಂಗಾರೆವ್ವ ಒಂಟಮೋರಿ ಅವರಿಗೆ ಹೇಳಿದರು. ಯಾವ ಅಂಗನವಾಡಿ ಎಂದು ತಿಳಿಸಿದರೆ ಕ್ರಮ ಕೈಗೊಳ್ಳುವುದಾಗಿ ಸಿಡಿಪಿಓ ಸಿಂಗಾರೆವ್ವ ಹೇಳಿದಾಗ ಕೆಲ ಅಂಗನವಾಡಿಗಳಿದ್ದು ಎಲ್ಲ ಕಡೆ ಸಮರ್ಪಕ ಉಸ್ತುವಾರಿ ಮಾಡಬೇಕೆಂದು ಹಾಜಿ ಹೇಳಿದರು.
ಈಪಂ ಕುಡಿಯುವ ನೀರು ಪೂರೈಕೆ ಎಇಇ ಶ್ರೀನಿವಾಸ ವಿಶ್ವಕರ್ಮ ಜಲಮಿಶನ್ ಯೋಜನೆಯಡಿ ತಾಲೂಕಿನ 17 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.ಸ
ಸಭೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಅಭಿವೃದ್ಧಿ ಕಾರ್ಯದ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ತಾಪಂ ಇಓ ಮುರಳೀಧರ ದೇಶಪಾಂಡೆ ಸ್ವಾಗತಿಸಿದರು.
ಬಾಕ್ಸ್: ತಾಲೂಕಿನಲ್ಲಿ 6 ಜನ ಜಿಲ್ಲಾ ಪಂಚಾಯ್ತಿ ಸದಸ್ಯರಿದ್ದರು ಸಭೆಯಲ್ಲಿ ಕೇವಲ ಇಬ್ಬರು ಸದಸ್ಯರು ಮಾತ್ರ ಹಾಜರಿದ್ದರು. ನಾಲ್ಕು ಜನ ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಜಿಪಂ ಸದಸ್ಯರಿಗಾಗಿ ನಡೆದ ಸಭೆಯಲ್ಲಿ ಹಾಜರಿರದೆ ಜಿಪಂ ಸಭೆಯಲ್ಲಿ ತಾಲೂಕಿನ ಅಭಿವೃದ್ಧಿ ಕುರಿತು ಯಾವ ಚರ್ಚೆ ಮಾಡುತ್ತಾರೆ ಎಂದು ಕೆಲ ಅಧಿಕಾರಿಗಳು ತಮ್ಮತಮ್ಮಲ್ಲಿ ಮಾತನಾಡುತ್ತಿರುವುದು ಕಂಡು ಬಂದಿತು.