ಜಿ.ಟಿ.ಡಿ. ನಮ್ಮ ನಾಯಕ : ಸಾ.ರಾ. ಮಹೇಶ್

ಮೈಸೂರು, ಜ.೦೮: ಶಾಸಕ ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅಲ್ಲದೇ, ಅಪ್ಪ ಮತ್ತು ಮಗ ಇಬ್ಬರೂ ಜೆಡಿಎಸ್ ನಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾ.ದಳ ಪಕ್ಷದಿಂದಲೇ ಅಪ್ಪ-ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಹೇಳುತ್ತಿದ್ದೇನೆ ಅವರು ಜಾ.ದಳದಲ್ಲೇ ಇರುತ್ತಾರೆ. ಚುನಾವಣೆಗೂ ಮುನ್ನ ಭಿನ್ನಾಭಿಪ್ರಾಯ ಇರೋದು ಪಕ್ಷದಲ್ಲಿ ಸಹಜ. ಮೊದಲಿನಿಂದಲೂ ಅದು ನಡೆದುಕೊಂಡು ಬಂದಿದೆ. ಆದರೆ, ಚುನಾವಣೆ ಬಂದ ತಕ್ಷಣ ನಾವೆಲ್ಲ ಒಂದಾಗುತ್ತೇವೆ. ಬೇರೆಯವರ ರೀತಿ ಭಿನ್ನಾಭಿಪ್ರಾಯಗಳನ್ನು ಒಳಗಡೆ ಇಟ್ಟುಕೊಳ್ಳುವುದಿಲ್ಲ. ಹೊರಗಡೆ ಮಾತನಾಡಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಮ್ಮ ಪಾರ್ಟಿ ಇರೋದೆ ಈ ರೀತಿ. ಜಿ.ಟಿ.ದೇವೇಗೌಡರನ್ನು ಉಚ್ಛಾಟಿಸುತ್ತೇವೆ ಎಂದು ಕುಮಾರಣ್ಣ ಆಗಲಿ, ನಾನಾಗಲಿ ಎಲ್ಲಿಯೂ ಹೇಳಿಲ್ಲ. ಜಿ.ಟಿ.ದೇವೇಗೌಡರು ಸಿಎಂ ಆಗಿದ್ದವರನ್ನೇ ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನು ನಾವ್ಯಾಕೆ ಉಚ್ಛಾಟಿಸುತ್ತೇವೆ ಎಂದು ಪ್ರಶ್ನಿಸಿದರಲ್ಲದೇ, ಉಚ್ಛಾಟಿಸುವಂಥ ಕೆಲಸ ಜಿ.ಟಿ.ದೇವೇಗೌಡರು ಏನು ಮಾಡಿದ್ದಾರೆ. ಅವರು ಹೇಳಿದಂತೆ ಜಾ.ದಳ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನು ಉಚ್ಛಾಟಿಸಬೇಕಲ್ಲವೇ. ಅದ್ಯಾರು ಆ ರೀತಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಅಂತ ಅವರ ಬಳಿಯೇ ಮಾಹಿತಿ ಪಡೆಯುತ್ತೇನೆ ಎಂದರು.
ಜಿ.ಟಿ.ದೇವೇಗೌಡರನ್ನು ಜಾ.ದಳ ಪಕ್ಷದಿಂದ ಉಚ್ಚಾಟಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಗುರುವಾರ ಜಿ.ಟಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷ ವಿರೋಧಿ ಕೆಲಸ ನಾನೇನು ಮಾಡಿಲ್ಲ. ಹಾಗೆ ಮಾಡಿದವರನ್ನು ಉಚ್ಛಾಟಿಸಲಿ ಎಂದು ತಿರುಗೇಟು ನೀಡಿದ್ದರು. ಅಲ್ಲದೇ, ಎಚ್.ಡಿ ಕುಮಾರಸ್ವಾಮಿಯವರಿಗೂ ಮಿಗಿಲಾದ ಹೈಕಮಾಂಡ್ ಮೈಸೂರಿನಲ್ಲಿದೆ ಎಂದು ಸಾ.ರಾ.ಮಹೇಶ್ ಅವರಿಗೆ ಜಿ.ಟಿ.ದೇವೇಗೌಡರು ಪರೋಕ್ಷವಾಗಿ ಚಾಟಿ ಬೀಸಿದ್ದರು. ಅದಕ್ಕೆ ಇಂದು ಈ ರೀತಿಯ ಅಚ್ಚರಿದಾಯಕ ಹೇಳಿಕೆಯನ್ನು ಸಾ.ರಾ.ಮಹೇಶ್ ನೀಡಿದ್ದಾರೆ.
ಜಿ.ಟಿ.ದೇವೇಗೌಡರೇ ನಮ್ಮ ನಾಯಕರು ಎನ್ನುವ ಮೂಲಕ ಜಿ.ಟಿ.ದೇವೇಗೌಡರ ಉಚ್ಛಾಟನೆಯ ಪ್ರಸ್ತಾಪಕ್ಕೆ ತೆರೆ ಎಳೆದಿದ್ದಾರೆ.