ಜಿ ಕೆ ಫೌಂಡೇಶನ್ ವತಿಯಿಂದ 75,000 ರಾಷ್ಟ್ರಧ್ವಜ ಉಚಿತ ವಿತರಣೆ

(ಸಂಜೆವಾಣಿ ವಾರ್ತೆ)
ಬೀದರ್: ಆ.6:ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಇಲ್ಲಿನ ಗುರುನಾಥ ಕೊಳ್ಳೂರ (ಜಿಕೆ) ಫೌಂಡೇಷನ್ ವತಿಯಿಂದ ಹಮ್ಮಿಕೊಂಡ ಜಿಲ್ಲೆಯ ಮನೆ-ಮನೆಗೂ 75 ಸಾವಿರ ರಾಷ್ಟ್ರ ಧ್ವಜಗಳ ಉಚಿತ ವಿತರಣೆ ಅಭಿಯಾನಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು.
ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಹರ್ ಘರ್ ತಿರಂಗಾ ಕಾರ್ಯಕ್ರಮ ಮಕ್ಕಳು, ಯುವಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ದೇಶಭಕ್ತಿ ಮೂಡಿಸಲಿದೆ. ಪ್ರತಿ ಮನೆಗಳ ಮೇಲೂ ತ್ರಿವರ್ಣ ಧ್ವಜ ಅಭಿಯಾನ ದೇಶಭಕ್ತಿಯ ಹೊಸ ಪ್ರಜ್ಞೆ ಬೇರೂರಿಸುವ ಜತೆಗೆ ದೇಶವನ್ನು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ವಿಶ್ವ ಗುರುವನ್ನಾಗಿ ಮಾಡುವ ಸಂಕಲ್ಪ ಹೊಂದಿದೆ ಎಂದು ಹೇಳಿದರು.
ಹಿರಿಯ ಉದ್ಯಮಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ್ ಅವರು ಕೊಡುಗೈ ದಾನಿಗಳು. ಧಾರ್ಮಿಕ, ಸಾಮಾಜಿಕ ಸೇರಿದಂತೆ ಪ್ರತಿ ಕ್ಷೇತ್ರದ ಜನಪರ ಕೆಲಸಗಳಿಗೆ ಅವರ ಕೊಡುಗೆ ಅಪಾರ. ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಿಲ್ಲಾಡಳಿತದ ಜತೆಗೆ ಕೈಜೋಡಿಸಿ 75 ಸಾವಿರ ರಾಷ್ಟ್ರ ಧ್ವಜಗಳನ್ನು ಜನರ ಮನೆಗೆ ಮುಟ್ಟಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ರಾಷ್ಟ್ರದ ಪ್ರತಿಯೊಬ್ಬರನ್ನೂ ಒಗ್ಗೂಡಿಸಲು ಮತ್ತು ಯುವಕರಲ್ಲಿ ದೇಶಭಕ್ತಿ ಮೂಡಿಸಲು ಪ್ರಧಾನಿ ಮೋದಿ ಅವರು ಈ ಅಭಿಯಾನ ಹಮ್ಮಿಕೊಂಡಿದ್ದಾರೆ. ಎಲ್ಲರೂ ಇದರಲ್ಲಿ ಸ್ವ ಇಚ್ಛೆಯಿಂದ ಭಾಗಿಯಾಗಿ ದೇಶಪ್ರೇಮ ಪ್ರದರ್ಶಿಸಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಕೆ. ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ `ಹರ್ ಘರ್ ತಿರಂಗಾ’ ಕರೆಗೆ ಪೂರಕವಾಗಿ ಜಿಲ್ಲೆಯ ಪ್ರತಿ ಮನೆಗಳ ಮೇಲೂ ತಿರಂಗಾ ಧ್ವಜ ಹಾರಿಸಬೇಕೆಂಬ ನಿಟ್ಟಿನಲ್ಲಿ ಫೌಂಡೇಷನ್ ವತಿಯಿಂದ ರಾಷ್ಟ್ರ ಧ್ವಜ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಎಲ್ಲ ಕೆಲಸಗಳಲ್ಲಿ ಫೌಂಡೇಷನ್ ಸಕ್ರೀಯವಾಗಿ ಭಾಗವಹಿಸಲಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಪ್ರಮುಖರಾದ ಪ್ರಭುರಾವ್ ವಸ್ಮತೆ, ವಿರೂಪಾಕ್ಷ ಗಾದಗಿ ಇದ್ದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಗುರುನಾಥ ರಾಜಗೀರಾ ನಿರೂಪಿಸಿದರು. ಸಿದ್ಧಾರೂಢ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ತಿರಂಗಾ ಧ್ವಜ ವಿತರಣೆ ಮಾಡಲಾಯಿತು.ಕರ್ನಾಟಕ ಕಾಲೇಜಿನಲ್ಲೂ ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮ ನಡೆಯಿತು.
ಫಲಾಪೇಕ್ಷೆ ಇಲ್ಲದೇ ಸೇವಾ ಕಾರ್ಯಯಾವುದೇ ಫಲಾಪೇಕ್ಷೆ ಇಲ್ಲದೇ ಸಾಮಾಜಿಕ ಸೇವೆ ಮಾಡುವ ಏಕೈಕ ಉದ್ದೇಶದೊಂದಿಗೆ ಫೌಂಡೇಷನ್ ಆರಂಭಿಸಲಾಗಿದೆ. ಹರ್ ಘರ್ ತಿರಂಗಾ ಅಭಿಯಾನ ಮೂಲಕ ಫೌಂಡೇಷನ್ ತನ್ನ ಜನಪರ, ಸಮಾಜಪರ ಕೆಲಸಕ್ಕೆ ಅಧಿಕೃತ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರ್ ಹೇಳಿದರು.
ಜಿಲ್ಲೆಯಾದ್ಯಂತ 75 ಸಾವಿರ ರಾಷ್ಟ್ರಧ್ವಜ ವಿತರಿಸುತ್ತಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.