ಜಿಹಾದಿ ಮಾನಸಿಕತೆಗೆ ಕೊನೆಯಿಲ್ಲವೆ

ಬೆಂಗಳೂರು, ಜು.೨೭- ಮಂಗಳೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆಯನ್ನು ಗಮನಿಸಿದರೆ ಜಿಹಾದಿ ಮಾನಸಿಕತೆಗೆ ಕೊನೆಯೇ ಇಲ್ಲವೇ? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಒಬ್ಬ ಮಾನವೀಯ ಕಳಕಳಿ ಇರೋ ವ್ಯಕ್ತಿ. ಪ್ರಾಣಿಯನ್ನು ಜೀವಪರವಾಗಿ ನೋಡುತ್ತಿದ್ದ. ಆತನ ಬಗ್ಗೆ ನಾನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ನೋವು ತೋಡಿಕೊಂಡ ಸಿ.ಟಿ ರವಿ, ಕೇಂದ್ರ ರಾಜ್ಯದಲ್ಲಿ ಎರಡೂ ಕಡೆ ನಾವೇ ಇದ್ದೇವೆ. ಆದರೂ ಹೀಗೆ ಆಗುತ್ತಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿದೆ. ಕಾರ್ಯಕರ್ತರ ಜತೆ ನಾವಿದ್ದೇವೆ ಎಂದರು.
ನಾವು ಕೇವಲ ಅಧಿಕಾರ ಮಾಡಲು ಬಂದಿಲ್ಲ, ಕಾರ್ಯಕರ್ತರ ಭಾವನೆಗೆ ಸ್ಪಂದಿಸುತ್ತೇವೆ. ವ್ಯವಸ್ಥೆಯನ್ನು ಜಿಹಾದ್ ವಿರುದ್ಧ ಹೋರಾಡಲು ಅಣಿಗೊಳಿಸಬೇಕಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ನಡೆಯುತ್ತಿದೆ. ಆದರೆ, ಆಗ ಹಿಂದೂ ವಿರೋಧಿ ಸರ್ಕಾರವಿತ್ತು. ಈಗ ಹಿಂದೂಪರ ಸರ್ಕಾರವಿದೆ. ನಾವು ಕ್ರಮ ಮಾಡದಿದ್ದರೆ ಕಷ್ಟ, ಜಿಹಾದ್ ಕಿತ್ತು ಹಾಕಲು ಬದ್ಧರಿದ್ದೇವೆ ಎಂದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲವನ್ನೂ ಚರ್ಚೆ ಮಾಡುವುದಾಗಿ ಸಿ.ಟಿ ರವಿ ಹೇಳಿದರು.