ಜಿಲ್ಲೆ, ಕರುನಾಡಿನ ಕೀರ್ತಿಯನ್ನು ಹೆಚ್ಚಿಸಿದ ಜೆಸ್ಕಾಂ

ಕಲಬುರಗಿ,ಜೂ.28: ಬಿಲ್ಲಿಂಗ್, ಶುಲ್ಕ ಸಂಗ್ರಹಣೆ, ವಿದ್ಯುತ್ ಸೋರಿಕೆ ತಡೆಗಟ್ಟುವಿಕೆ, ಗ್ರಾಹಕರಿಗೆ ಉತ್ತಮ ಸೇವೆ, ಇಂಧನ ದಕ್ಷತೆ, ಕಾರ್ಯಾಚರಣೆಯ ಅಂಶಗಳ ಆದಾರದ ಮೇಲೆ ಕೇಂದ್ರ ಸರ್ಕಾರದ ಇಂಧನ ಇಲಾಖೆ ಪಟ್ಟಿಯಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ(ಜೆಸ್ಕಾಂ) ದೇಶದಲ್ಲೇ ಎರಡನೇ ರ್ಯಾಂಕ್ ಪಡೆದಿರುವ ಪ್ರಯುಕ್ತ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ಮಿನಿ ವಿಧಾನಸೌಧ ಹತ್ತಿರವಿರುವ ಜೆಸ್ಕಾಂ ಕಚೇರಿಯಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಅವರಿಗೆ ಸಂಸ್ಥೆಯ ಪರವಾಗಿ ಗೌರವಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ನಮ್ಮ ಸಂಸ್ಥೆ ದೇಶದಲ್ಲೇ ಎರಡನೇ ರ್ಯಾಂಕ್ ಪಡೆದಿರುವುದು ಅತ್ಯಂತ ಸಂತಸ ತಂದಿದೆ. ಬಿಲ್ಲಿಂಗ್ ಮತ್ತು ಶುಲ್ಕ ಸಂಗ್ರಹಣೆಯಲ್ಲಿ ಗಣನೀಯ ಪ್ರಗತಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಈ ಸಾಧನೆಗೆ ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗದವರ ದಕ್ಷ ಸೇವೆ, ನಾಗರಿಕರ ಸಹಕಾರ ದೊರೆತ್ತಿದ್ದು, ಎಲ್ಲರು ಅಭಿನಂದನಾರ್ಹರಾಗಿದ್ದಾರೆ ಎಂದರು.
ಸಮಾಜ ಸೇವಕರಾದ ಎಚ್.ಬಿ.ಪಾಟೀಲ, ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಜೆಸ್ಕಾಂ ಸಂಸ್ಥೆಯು ದೇಶದಲ್ಲೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ಕಲಬುರಗಿ ಜಿಲ್ಲೆ, ವಿಭಾಗ ಮತ್ತು ಕರ್ನಾಟಕ ರಾಜ್ಯದ ಕೀರ್ತಿಯನ್ನು ದೇಶದೆಲ್ಲೆಡೆ ಹೆಚ್ಚಿಸುವ ಕಾರ್ಯ ಮಾಡಿರುವುದು ಸಮಸ್ತ ಕರುನಾಡಿಗೆ ಅತ್ಯಂತ ಸಂತಸ, ಹೆಮ್ಮೆಯ ಸಂಗತಿಯಾಗಿದೆ. ವಿದ್ಯುತ್ ಇಲಾಖೆ ನೌಕರರು ತುಂಬಾ ಅಪಾಯವಾದ ಸ್ಥಿತಿಯಲ್ಲಿಯೂ ಮತ್ತು ಹಗಲು-ರಾತ್ರಿಯೆನ್ನದೆ ಕಾರ್ಯನಿರ್ವಹಿಸುತ್ತಾರೆ. ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.
ಜೆಸ್ಕಾಂ ಅಧಿಕಾರಿಗಳಾದ ಆರ್.ಡಿ.ಚಂದ್ರಶೇಖರ, ಸಂತೋಷ ಹಿಬಾರೆ, ರಮೇಶ ಪವಾರ, ವಾಸುದೇವ ಎಚ್., ಶಂಕರ ಅಡಕಿ, ಬಳಗದ ಸದಸ್ಯರಾದ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ರಾಜು ಹೆಬ್ಬಾಳ, ಪ್ರಭು ಮಡ್ಡಿತೋಟ ಹಾಗೂ ಜೆಸ್ಕಾಂನ ಅನೇಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.