ಜಿಲ್ಲೆಯ 60 ಗ್ರಂಥಾಲಯಗಳು ಡಿಜಿಟಲೀಕರಣ

ಚಿತ್ರದುರ್ಗ.ಜು.೧೯; ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್‍ಗಳ ಮೂಲಕ ಜಿಲ್ಲೆಯಲ್ಲಿ ಈಗಾಗಲೇ 60 ಗ್ರಂಥಾಲಯಗಳ ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಆಯ್ದ 40 ಗ್ರಾಮ ಪಂಚಾಯತ್ ಗ್ರಂಥಾಲಯಗಳು “ಗ್ರಾಮ ಡಿಜಿ ವಿಕಸನ” ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಗ್ರಂಥಾಲಯಗಳಿಗೆ ಮೊಬೈಲ್‍ಗಳು ಹಾಗೂ ಲ್ಯಾಪ್‍ಟಾಪ್‍ಗಳನ್ನು ವಿತರಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಈಗಾಗಲೇ 60 ಗ್ರಂಥಾಲಯಗಳ ಡಿಜಿಲಿಕರಣ ಮಾಡಿದ್ದು, ಇದರ ಜೊತೆಗೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ಫೌಂಡೇಶನ್ ಸಂಸ್ಥೆಯ ವತಿಯಿಂದ ನೀಡಿರುವ ಎಲ್ಲ ಡಿಜಿಟಲ್ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಪಂಚಾಯಿತಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಸಲಹೆ ನೀಡಿದರು.ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಗುರುಪಾದ ಶಿರಬಡಗಿ ಮಾತಾನಾಡಿ, ಈಗಾಗಲೇ ಆಯ್ದ 40 ಗ್ರಂಥಾಲಯಗಳಿಗೆ ಡಿಜಿಟಲ್ ಸಂಪನ್ಮೂಲಗಳನ್ನು ವಿತರಿಸಲಾಗಿದ್ದು, ಪ್ರತಿದಿನ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಗ್ರಂಥಪಾಲಕರ ಸಹಕಾರದಿಂದ ಕಲಿಯುತ್ತಿದ್ದಾರೆ. ಮುಂದಿನ ಹಂತದಲ್ಲಿ ಗ್ರಂಥಪಾಲಕರಿಗೆ ತಾಲೂಕುವಾರು ಡಿಜಿಟಲ್ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವು ಗ್ರಾಮೀಣ ಪ್ರದೇಶದಲ್ಲಿರುವ 12 ರಿಂದ 24 ವಯೋಮಾನದ ವಿದ್ಯಾರ್ಥಿಗಳು, ಯುವಕ ಯುವತಿಯರಿಗೆ ಇಂದಿನ 21ನೇ ಶತಮಾನದಲ್ಲಿ ಡಿಜಿಟಲ್ ಕೌಶಲಗಳ ಅವಶ್ಯಕತೆ ಇದ್ದು ಅದನ್ನು ಗ್ರಾಮೀಣ ಭಾಗದ ಯುವಕ ಯುವತಿಯರು ಪಡೆಯುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಆಯ್ದ 40 ಗ್ರಂಥಾಲಯಗಳಿಗೆ 1 ಆಂಡ್ರಾಯ್ಡ್ ಟಿ.ವಿ, 4 ಮೊಬೈಲ್, ಡೆಲ್ ಮಾನಿಟರ್, ಕ್ರೋಮ್‍ಬುಕ್ ಲ್ಯಾಪ್‍ಟಾಪ್ ಹಾಗೂ ಇಂಟರ್‍ನೆಟ್ ವ್ಯವಸ್ಥೆಯನ್ನು ಈ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಕಲಿಯಲು ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದರು.
ನೀಡಿರುವ ಮೊಬೈಲ್‍ಗಳಲ್ಲಿ ಶಿಕ್ಷಣ ಪೀಡಿಯಾ ಎಂಬ ಅಪ್ಲಿಕೇಶನ್ ಅಳವಡಿಸಿದ್ದು ಅದರಲ್ಲಿ 8, 9, 10ನೇ ತರಗತಿಯ ಪಾಠಗಳು ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು, ಡಿಜಿಟಲ್ ಕೌಶಲಗಳ ವಿಡಿಯೋಗಳನ್ನು ನೋಡಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬಹುದು. ಟಿ.ವಿಗೆ ಇಂಟರ್‍ನೆಟ್ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳು ತಮಗೆ ಬೇಕಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಪಾಠಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ರೈತರು ಸಹ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ಬಸವರಾಜ ಹೊಳ್ಳಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಂಗಸ್ವಾಮಿ, ಆರು ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಂಥಪಾಲಕರು ಹಾಗೂ ಶಿಕ್ಷಣ ಫೌಂಡೇಶನ್ ಸಂಸ್ಥೆಯ ಕೃಷ್ಣ ಭಾಗವಹಿಸಿದ್ದರು.