ಜಿಲ್ಲೆಯ 21,774 ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲು ಸಿದ್ಧತೆ: ಡಿಎಚ್‍ಓ ಡಾ. ರಾಜಶೇಖರ್ ಮಾಲಿ

ಕಲಬುರಗಿ: ಜ. 14:ಮೊದಲ ಹಂತದಲ್ಲಿ ಬೆಂಗಳೂರಿನಿಂದ 12 ಸಾವಿರ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ನನ್ನು ಸೂಕ್ತ ಪೊಲೀಸ್ ಭದ್ರತೆಯಲ್ಲಿ ಕಲಬುರಗಿಗೆ ತರಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಅವರು ಸ್ವೀಕರಿಸಿ ತಮ್ಮ ಕಚೇರಿಯಲ್ಲಿ ದಾಸ್ತಾನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಚ್. ಓ, ಡಾ. ರಾಜಶೇಖರ್ ಮಾಲಿ ಅವರು, ಜಿಲ್ಲೆಗೆ ಒಟ್ಟು 24ಸಾವಿರ ಡೋಸ್ ಲಸಿಕೆ ಬೇಕಾಗಿದ್ದು, 2ನೇ ಹಂತದಲ್ಲಿ ಇನ್ನೂ 12 ಸಾವಿರ ಡೋಸ್ ಬರಲಿದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ, ಆರು ತಾಲ್ಲೂಕು ಅಸ್ಪತ್ರೆ ಹಾಗೂ ಗೊಬ್ಬೂರು-ಬಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಅಂದರೆ ಒಟ್ಟು 800 ಮಂದಿಗೆ ಇದೇ 16 ರಂದು (ಶನಿವಾರ) ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 137 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಜನವರಿ 16ರಂದು 8 ಕೇಂದ್ರಗಳಲ್ಲಿ ಹಾಗೂ ಜ.18ರಿಂದ ಇನ್ನುಳಿದ ಸಂಸ್ಥೆಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಮತ್ತು ಖಾಸಗಿ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ದಾದಿಯರು, ಆಸ್ಪತ್ರೆ ಮತ್ತು ನಸಿರ್ಂಗ್ ಹೋಂಗಳಲ್ಲಿನ ಔಷಧಾಲಯಗಳ ಸಿಬ್ಬಂದಿ (ಫಾರ್ಮಸಿಸ್ಟ್), ಡಾಟಾ ಎಂಟ್ರಿ ಆಪರೇಟರ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 21,774 ಆರೋಗ್ಯ ಕಾರ್ಯಕರ್ತೆಯರಿಗೆ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್ ಲಸಿಕೆ ಹಾಕಲು 155 ತಂಡ ರಚಿಸಲಾಗಿದ್ದು, 775 ಸಿಬ್ಬಂದಿ ನಿಯೋಜಿಸಲಾಗಿದೆ. ದೇಶಾದ್ಯಂತ ನಡೆಯುವ ಈ ಕಾರ್ಯಕ್ರಮಕ್ಕೆ ಶನಿವಾರ 11ಗಂಟೆಗೆ ಪ್ರಧಾನ ಮಂತ್ರಿಗಳು ನವದೆಹಲಿಯಲ್ಲಿ ಚಾಲನೆ ನೀಡಲಿದ್ದು, ನಂತರ ಜಿಲ್ಲೆಯ 8 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.
ನಾಳೆ ಪೊಲೀಸ್ ಭದ್ರತೆಯಲ್ಲಿ ತಾಲ್ಲೂಕು ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆಗಳನ್ನು ಸಾಗಿಸಲಾಗುವುದು ಎಂದರು. ಇದಕ್ಕೂ ಮುನ್ನ ಬೆಂಗಳೂರಿನಿಂದ ಕಲಬುರಗಿಗೆ ಪೊಲೀಸ್ ಭದ್ರತೆಯಲ್ಲಿ ವ್ಯಾಕ್ಸಿನ್ ತರಲಾಗಿದ್ದು, ಯಾದಗಿರಿ ಜಿಲ್ಲೆಯ ಗಡಿಯಿಂದ ವ್ಯಾಕ್ಸಿನ್ ವಾಹನಕ್ಕೆ ಕಲಬುರಗಿ ಪೊಲೀಸರ ಭದ್ರತೆ ಒದಗಿಸಿ ತರಲಾಯಿತು ಎಂದು ತಿಳಿಸಿದರು.