ಜಿಲ್ಲೆಯ ಸಮಾಹಿಪ್ರಾ ಶಾಲೆಗಳ ಅಭಿವೃದ್ಧಿಗೆ ಆದ್ಯತೆ -ಶಾಸಕ ಜಿ ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.೬: ಜಿಲ್ಲೆಯ ಸರಕಾರಿ ಪ್ರಾಥಮಿಕ‌ ಶಾಲೆಗಳ ಅಭಿವೃದ್ಧಿಗೆ ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಶನ್ ಕಾರ್ಪೊರೇಷನ್ (ಕೆ ಎಂ ಆರ್ ಸಿ) ನಲ್ಲಿ 462 ಕೋಟಿ ರೂ. ಅನುದಾನ ಮೀಸಲಿದೆ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ತಿಳಿಸಿದರು.
ನಗರದ ಡಿಎಆರ್ ಪೊಲೀಸ್ ಲೈನ್ ಸ ಮಾ ಹಿ ಪ್ರಾ ಶಾಲೆಯಲ್ಲಿ ನಿಮಗಾಗಿ‌ ನಾವು ಸಂಸ್ಥೆ ಏರ್ಪಡಿಸಿದ್ದ ‘ನಮ್ಮ ಶಾಲೆ ಹಬ್ಬ’ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯ ಬಳಿಕ ಸುಮಾರು ಎರಡು‌ ಕೋಟಿ ರೂ. ವೆಚ್ಚದಲ್ಲಿ ಮಾದರಿ ಶಾಲೆಯನ್ನಾಗಿ ಪರಿವರ್ತಿಸ ಲಾಗುವುದು ಎಂದು ಭರವಸೆ ನೀಡಿದರು.
1971 ರಿಂದ 1978 ರವರೆಗೆ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು ಶಾಲಾ ಮೈದಾನದಲ್ಲಿ ಕ್ರಿಕೆಟ್‌, ಗೋಲಿ, ಚಿನ್ನದಾಂಡು, ಲಗೋರಿ ಆಡಿದ್ದನ್ನು ಶಾಸಕರು ಸ್ಮರಿಸಿದರು.
ಖಾಸಗಿ ಶಾಲೆಗಳಿಗಿಂತಲೂ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು ಅತ್ಯುತ್ತಮವಾಗಿ ಪಾಠ ಪ್ರವಚನ ನಡೆಯುತ್ತವೆ. ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದರು.
ಬಾಲ್ಯದ ದಿನಗಳಲ್ಲಿ ಡಿಎಆರ್ ಮೈದಾನದ ಓಪನ್ ಥೇಟರ್ ನಲ್ಲಿ ಗೋಡೆಯ (ಪರದೆಯ) ಮೇಲೆ ಸಿನಿಮಾ ವೀಕ್ಷಿಸುತ್ತಿದ್ದಾಗ ಕರೆಂಟ್ ಹೋಗುತ್ತಿತ್ತು ಈಗಲೂ ಹೋಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಮುಖ್ಯ ಅತಿಥಿ ಡಿಡಿಪಿಐ ಅಂದಾನಪ್ಪ ಎಂ ವಡಿಗೇರಿ ಅವರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ನೈತಿಕತೆ, ಮೌಲ್ಯಯುತ ಶಿಕ್ಷಣ ದೊರೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದರು.
ನಿಮಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳಲ್ಲಿ ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಮಾಜ‌ಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದು ಇತರರಿಗೆ ಮಾದರಿ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್, ಸಿಂಧನೂರು ಉಪ ತಹಸೀಲ್ದಾರ್ ಎನ್ ವರಪ್ರಸಾದ್, ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಕೆ.ಈರಮ್ಮ ಅವರು ಮಾತನಾಡಿದರು.
ಎಸ್.ಡಿಎಂಸಿ ಅಧ್ಯಕ್ಷೆ ಬಿ.ಶ್ರೀದೇವಿ, ಸಂಸ್ಥೆಯ ಅಧ್ಯಕ್ಷ ಎಂ ಎಸ್ ವಿನಯ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಕೆಂಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಾಪಕಿ ಸುನೀತ ಎಂ, ಪ್ರಶಾಂತ್ ಕುಮಾರ್ ನಿರೂಪಿಸಿದರು. ಎಂ.ಸಂದ್ಯಾ, ಮೆಹಬೂಬ್ ಬಾಷ, ಪಂಪಾಪತಿ, ಬಿ ಮಾರುತಿ‌ ನಿರ್ವಹಿಸಿದರು. ಭಾರತಿ, ಮೀನಾಕ್ಷಿ, ರಾಯಚೊಟಿ ಸ್ವಾಮಿ, ವೀರೇಶ, ದಕ್ಷಿಣಮೂರ್ತಿ, ಪ್ರಕಾಶ್, ಪ್ರಭು, ಶಿವಾಜಿ, ಬಾಲು, ಸುರೇಶ್, ಉಮೇಶ್ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಪುಣ್ಯಕೋಟಿ, ಬಹುತ್ವ ಸಾರುವ ರೂಪಕ, ಜಾನಪದ ನೃತ್ಯಗಳು ಸಭಿಕರ ಮನಸೂರೆಗೊಂಡವು.