ಬೀದರ್:ಜೂ.13: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂದು ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಜನವಾಡ ರಸ್ತೆಯಲ್ಲಿ ಇರುವ ಝೀರಾ ಕನ್ವೆನ್ಶನ್ ಹಾಲ್‍ನಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಮೊದಲ ಆದ್ಯತೆ ಕೊಡಲಾಗುವುದು. ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈಶ್ವರ ಖಂಡ್ರೆ ಅವರ ಜತೆಗೂಡಿ ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸಲಿದ್ದೇನೆ ಎಂದು ಸನ್ಮಾನ ಸ್ವೀಕರಿಸಿದ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಹೇಳಿದರು.
ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಸಚಿವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಬೃಹತ್ ಹಾರ ಹಾಕಿ ಸತ್ಕರಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮುಖಂಡರಾದ ಭೀಮಸೇನರಾವ್ ಸಿಂಧೆ, ಕೆ. ಪುಂಡಲೀಕರಾವ್, ಗುರಮ್ಮ ಸಿದ್ದಾರೆಡ್ಡಿ, ಮಡಿವಾಳಪ್ಪ ಮಂಗಲಗಿ, ಮುರಳಿಧರ ಎಕಲಾರಕರ್, ಆನಂದ ದೇವಪ್ಪ, ಪಂಡಿತರಾವ್ ಚಿದ್ರಿ, ಅಮೃತರಾವ್ ಚಿಮಕೋಡೆ, ಭಾರತಬಾಯಿ ಕೊಡಂಬಲ್, ಸಂಜಯ್ ಜಾಗೀರದಾರ್, ಬಶೀರೊದ್ದಿನ್ ಹಾಲಹಿಪ್ಪರ್ಗಾ, ರೋಹಿದಾಸ್ ಘೋಡೆ, ಎಂ.ಎ. ಸಮಿ, ಪರ್ವೇಜ್ ಕಮಲ್, ಚಂದ್ರಕಾಂತ ಹಿಪ್ಪಳಗಾಂವ್, ಮಹಮ್ಮದ್ ಯುಸೂಫ್, ಶಾಕೀರ್, ಅಜಮತ್ ಪಟೇಲ್, ಸಂಜುಕುಮಾರ ಡಿ.ಕೆ, ಗೋವರ್ಧನ್ ರಾಠೋಡ್, ಶಂಕರ ರೆಡ್ಡಿ ಚಿಟ್ಟಾ, ಸಚಿನ್ ಮಲ್ಕಾಪುರ, ಶರಣಪ್ಪ ಶರ್ಮಾ, ನಿಸಾರ್ ಅಹಮ್ಮದ್, ನಯೀಮ್ ಕಿರ್ಮಾನಿ, ಪೂಜಾ ಜಾರ್ಜ್, ಇರ್ಷಾದ್ ಅಲಿ ಪೈಲ್ವಾನ್ ಮತ್ತಿತರರು ಇದ್ದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ನಿರೂಪಿಸಿದರು.
ಇದಕ್ಕೂ ಮುನ್ನ ನೂತನ ಸಚಿವರನ್ನು ಶಹಾಪುರ ಗೇಟ್ ಬಳಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಝೀರಾ ಕನ್ವೆನ್ಶನ್ ಹಾಲ್‍ಗೆ ಕರೆ ತರಲಾಯಿತು.