(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.19: ನಾನು ಈ ವರೆಗೆ ಒಂದು ಕ್ಷೇತ್ರದ ಶಾಸಕನಾಗಿದ್ದೆ ಈಗ ಸಚಿವನಾಗಿ ಜಿಲ್ಲೆಯ ಉಸ್ತುವಾರಿ ಹೆಗಲೇರಿದೆ. ಹಾಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಾಧ್ಯಮಗಳು ನೀಡುವ ಸಲಹೆಗೆ ಸದಾ ಸ್ವಾಗತಿಸುವೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ನಗರದ ಅವರ ನಿವಾಸದಲ್ಲಿ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜನರ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯ ಸರ್ಕಾರದಿಂದ ಆಗಬೇಕಾಗಿರುವ ಮಹತ್ವದ ವಿಷಯಗಳನ್ನು ನನ್ನ ಗಮನಕ್ಕೆ ತಂದರೂ, ಇಲ್ಲವೇ ಮಾಧ್ಯಮಗಳಲ್ಲಿ ಪ್ರಕಟಿಸಿದರೂ ಅವನ್ನು ಪರಿಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.
ಹೊಸದಾಗಿ ಸಚಿವನಾಗಿದ್ದೇನೆ. ಕ್ಷೇತ್ರದ ಜಿಲ್ಲೆಯ, ರಾಜ್ಯದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ವಿರೋಧ ಪಕ್ಷದಲ್ಲಿರುವವರು ನಮ್ಮ ಪ್ರತಿ ಹೆಜ್ಜೆಯನ್ನು ಗಮನಿಸುತ್ತಿದ್ದಾರೆ. ನಾವು ಮಾಡುವ, ನಿರ್ಲಕ್ಷಿಸುವ ಸಣ್ಣ ತಪ್ಪನ್ನು ಸಹ ದೊಡ್ಡದು ಮಾಡಿ ಪ್ರಚಾರ ಪಡೆಯುವ ಪ್ರಯತ್ನದಲ್ಲಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಮಾರಾಟದ್ದು ದೊಡ್ಡ ಪಿಡುಗಾಗಿದೆ. ಅದನ್ನು ಸಂಪೂರ್ಣ ಮಟ್ಟ ಹಾಕುವ ಮಹತ್ವದ ಹೆಜ್ಜೆ ನನ್ನದು ಎಂದರು.
ಮಾಧ್ಯಮದವರೆಲ್ಲಾ ನನಗೆ ಸ್ನೇಹಿತರಿದ್ದಂತೆ. ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಆ ನಂತರ ಏನಿದ್ದರೂ ಅಭಿವೃದ್ಧಿ ಕಡೆ ಗಮನ ಎಂದರು.
ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ವೀರಭದ್ರಗೌಡ ತಮ್ಮ ಪ್ರವಾಸದ ವಿವರ, ಸಭೆ ಸಮಾರಂಭಗಳ ಮಾಹಿತಿ ಎಲ್ಲಾ ಮಾಧ್ಯಮಗಳಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಿ, ಮಾಧ್ಯಮಗಳಲ್ಲಿ ಪ್ರಕಟಿಸಿದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದರೆ, ಆ ಬಗ್ಗೆಯೂ ತಿಳಿಸುವ ಕಾಯಕ ಆಗಬೇಕೆಂದರಲ್ಲದೆ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನೀಡಿದ ಈ ಹಿಂದಿನ ಭರವಸೆ ಈಡೇರಿಸಿ ಎಂದರು.
ಉಪಾಧ್ಯಕ್ಷ ಬಜಾರಪ್ಪ ಮಾತನಾಡಿ, ಸುದ್ದಿಗೋಷ್ಠಿಗಳನ್ನು ಅಧಿಕೃತವಾಗಿ ಕಛೇರಿಗಳಲ್ಲಿ ನಡೆಸಿ ಎಂದು ಮನವಿ ಮಾಡಿದರು.
ಅಧ್ಯಕ್ಷ ಯಾಳ್ವಿ ವಲಿಭಾಷ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ವೆಂಕೋಬಿ ಸಂಗನಕಲ್ಲು, ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.