ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ – ಶಾಸಕ

ಎಸ್‌ಇಸಿಟಿ ಸ್ನಾತಕೋತ್ತರ ಮಹಾವಿದ್ಯಾಲಯ – ೨೦ ರ ಸಂಭ್ರಮ
ರಾಯಚೂರು.ಮೇ.೧೪- ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪಕದ ಪಡೆದು, ಱ್ಯಾಂಕ್ ಗಳಿಸುತ್ತಿರುವುದು ಗಮನಿಸಿದರೇ, ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ ಎನ್ನುವುದಕ್ಕೆ ನಿದರ್ಶನವೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಶರಣಬಸವೇಶ್ವರ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ೨೦ ರ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರೆ ಸಂತೋಷ ಪಡುವ ಕಾಲವಿದು. ಆದರೆ, ಈಗ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯುವ ಸಾಧನೆ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಸುಧಾರಣೆಗಾಗಿ ಸರ್ಕಾರ ಒದಗಿಸುತ್ತಿರುವ ವಿಶೇಷ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿ ಸುಧಾರಣೆಗೊಂಡಿದೆ. ಇದರಿಂದ ಹೆಚ್ಚಿನ ಸಾಧನೆ ಮಾಡಲಾಗುತ್ತಿದೆ.
ಶಿಕ್ಷಣ ಸಂಸ್ಥೆ ನಡೆಸುವುದು ಇಂದು ಅಷ್ಟು ಸುಲಭವಲ್ಲ. ಒಂದು ಸಂಸಾರ ನಡೆಸುವುದಕ್ಕಿಂತ ಶಿಕ್ಷಣ ಸಂಸ್ಥೆ ನಡೆಸುವುದು ಕಠಿಣವಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹೀಗೆ ಅನೇಕ ರೀತಿಯ ಸಮಸ್ಯೆಗಳ ಮಧ್ಯೆ ಸಂಸ್ಥೆಯನ್ನು ನಿರ್ವಹಿಸಬೇಕಾಗಿದೆ. ಶರಣಬಸವೇಶ್ವರ ಎಜ್ಯುಕೇಷನ್ ಟ್ರಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ಕೇಳುವುದಿಲ್ಲ. ಅವರು ಎಷ್ಟೇ ಕೊಟ್ಟರು ತೆಗೆದುಕೊಳ್ಳುತ್ತೇವೆಂದು ಪ್ರಸ್ತಾವಿಕ ನುಡಿಗಳನ್ನು ಸಂಸ್ಥೆಯ ಮುಖ್ಯಸ್ಥರ ಹೇಳಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇಂದಿನ ಈ ಸಮಾರಂಭ ಹತ್ತು, ಹಲವು ವೈವಿಧ್ಯತೆಯನ್ನು ಒಳಗೊಂಡಿದೆ. ಹಳೆ ವಿದ್ಯಾರ್ಥಿಗಳು, ಹೊಸ ವಿದ್ಯಾರ್ಥಿಗಳ ಸಂಗಮ. ವಿದ್ಯಾರ್ಥಿಯ ಜೀವನ ತನ್ನದೇಯಾದ ಮಹತ್ವವನ್ನು ಹೊಂದಿದೆ. ಪಿಯುಸಿ ವರೆಗೂ ಪಾಲಕರ ನಿಗಾದಲ್ಲಿ ಇರುವ ನಾವು ಪದವಿ ನಂತರ ಸ್ನೇಹಿತರ ಒಡನಾಟದಲ್ಲಿ ಜೀವನ ಕಳೆಯುತ್ತೇವೆ. ನಮ್ಮ ಭವಿಷ್ಯದ ಗೊತ್ತು, ಗುರಿಗೆ ಅಕ್ಕಪಕ್ಕದ ವಿದ್ಯಾರ್ಥಿಗಳೇ ಪ್ರೇರಣೆ ಮತ್ತು ಮಾರ್ಗದರ್ಶಕವಾಗಿರುತ್ತಾರೆ. ವಿದ್ಯಾರ್ಥಿ ಜೀವನ ನಂತರ ಎಲ್ಲಾ ಮಿತ್ರರೊಂದಿಗೆ ನಿರಂತರ ಸಂಪರ್ಕ ಹೊಂದುವ ಅಗತ್ಯವಿದೆ. ನನ್ನ ಸಹಪಾಠಿಗಳ ಸಂಪರ್ಕ ನಾನು ಇಂದಿಗೂ ಮುಂದುವರೆಸಿದ್ದೇನೆ. ಪ್ರತಿ ವರ್ಷ ಮೂರು ದಿನ ಎಲ್ಲಾ ಮಿತ್ರರು ಒಂದೆಡೆ ಕಳೆಯುತ್ತೇವೆ.
ಶರಣಬಸವೇಶ್ವರ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆಯ ೫ ಜನ ವಿದ್ಯಾರ್ಥಿಗಳಿಗೆ ಮತ್ತು ಱ್ಯಾಂಕ್ ಪಡೆದ ೫ ಜನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ವಹಿಸಿದ್ದರು. ಶಿವಬಸ್ಸಪ್ಪ ಮಾಲಿ ಪಾಟೀಲ್, ರಂಗಣ್ಣ ಅಳ್ಳುಂಡಿ, ಕಡಗೋಳ ಆಂಜಿನೇಯ್ಯ, ವೈ.ಗೋಪಾಲರೆಡ್ಡಿ, ಡಾ.ಪೂಜಾ ರಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.