ಚಾಮರಾಜನಗರ, ಏ.14:- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಗಳಿಗೆ ಹಾಗೂ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರುಇಂದು ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಚಾಮರಾಜನಗರತಾಲೂಕಿನ ಬಾಣಹಳ್ಳಿ, ಕೊಳ್ಳೇಗಾಲ ತಾಲೂಕಿನ ಟಗರುಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್‍ಪೋಸ್ಟ್ ಗಳಿಗೆ ಭೇಟಿಕೊಟ್ಟು ಪರಿಶೀಲಿಸಿದರು.
ಚೆಕ್‍ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಹೇಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಖುದ್ದು ವೀಕ್ಷಿಸಿದರು. ಪ್ರತಿದಿನ ಎಷ್ಟು ವಾಹನಗಳು ಸಂಚರಿಸುತ್ತಿವೆ? ತಪಾಸಣೆ ವೇಳೆ ಯಾವ ಪ್ರಕ್ರಿಯೆ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಿದರು.
ಎಲ್ಲಾ ಬಗೆಯ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಹಣ, ವಸ್ತುಗಳನ್ನು ಸಾಗಿಸುವ ವೇಳೆ ಅಧಿಕೃತ ದಾಖಲೆಗಳು ಇವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ದಾಖಲೆಗಳು ಇರದಿದ್ದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚೆಕ್ ಪೋಸ್ಟ್ ಗಳಲ್ಲಿ ದಿನದ 24 ಗಂಟೆಗಳ ಅವಧಿಯಲ್ಲಿಯೂ ತಪಾಸಣೆ ಮಾಡಬೇಕು. ಎಲ್ಲಿಯೂ ಲೋಪಕ್ಕೆ ಅವಕಾಶವಾಗಬಾರದು. ವಾಹನಗಳ ಮೇಲೆ ಸೂಕ್ತ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿಡಿ.ಎಸ್. ರಮೇಶ್ ಅವರು ಚೆಕ್ ಪೋಸ್ಟ್‍ಅಧಿಕಾರಿ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಹನೂರು, ಕೊಳ್ಳೇಗಾಲ ಭಾಗದ ವಲ್ನರಬಲ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹನೂರು ತಾಲೂಕಿನ ರಾಮಾಪುರದಲ್ಲಿರುವ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆ ಹಾಗೂ ಕೊಳ್ಳೇಗಾಲ ತಾಲೂಕಿನ ಹೆಚ್.ಮೂಕಹಳ್ಳಿ ಮತಗಟ್ಟೆಗೆ ಭೇಟಿಕೊಟ್ಟು ವೀಕ್ಷಿಸಿದರು.