ಜಿಲ್ಲೆಯ ಬೇಡಿಕೆಗಳ ಕುರಿತು ಜನರೇ ಧ್ವನಿ ಎತ್ತಬೇಕು

ಕೋಲಾರ, ಆ.೬: ಜಿಲ್ಲೆಯ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಧ್ವನಿ ಎತ್ತದ ಕಾರಣದಿಂದ ಜನರೇ ಧ್ವನಿ ಎತ್ತಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಜನಾಗ್ರಹ ಜಾಥಾ ಮೂಲಕ ಜಿಲ್ಲೆಯ ಬೇಡಿಕೆಗಳನ್ನು ಸರಕಾರಕ್ಕೆ ಮುಟ್ಟಿಸಿ ಹೊಸ ಮನ್ವಂತರಕ್ಕೆ ಸೃಷ್ಠಿಸಬೇಕಾಗಿದೆಯೆಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ‘ಕೋಲಾರ ಜಿಲ್ಲಾ ಸಮಗ್ರ ಅಭಿವೃದ್ಧಿಗಾಗಿ ಜನಪರ ವೇದಿಕೆ ಗೌರವಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಶುಕ್ರವಾರ ಕೋಲಾರ ಜಿಲ್ಲಾ ಸಮಗ್ರ ಅಭಿವೃದ್ಧಿಗಾಗಿ ಜನಪರ ವೇದಿಕೆಯು ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಕೋಲಾರ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಜನಾಗ್ರಹ ಜಾಥಾ ಕಲಾವಿದರಿಗೆ ಹಾಡಿನ ತರಬೇತಿ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನರನ್ನು ಯಾಮಾರಿಸಿ ಮತ ಪಡೆದು ಗೆದ್ದು ಹೋಗುವ ನಾಯಕರಿಗೆ ಇಚ್ಛಾಶಕ್ತಿ ಇಲ್ಲವಾಗಿದೆ, ಈ ಅನ್ಯಾಯದ ವಿರುದ್ದ ಜನರಲ್ಲಿ ದೊಡ್ಡಮಟ್ಟದ ಜಾಗೃತಿ ಆಗಬೇಕಾಗಿದೆ, ಜಿಲ್ಲೆಯಲ್ಲಿ ನೆಮ್ಮದಿಯುತ ಬದುಕು ಉಳಿಸಿಕೊಳ್ಳಲು ಜನರೇ ಬೀದಿಗೆ ಬರುವಂತಾಗಿದೆ, ಸಣ್ಣಧ್ವನಿಯೂ ದೊಡ್ಡಧ್ವನಿಯಾದರೆ ಮಾತ್ರವೇ ಉಳಿವು ಸಾಧ್ಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಕೋಲಾರ ಜಿಲ್ಲೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತಂತೆ ಮನರಂಜನೆಯ ಜೊತೆಗೆ ಅರಿವು ಮೂಡಿಸುವ ಸಲುವಾಗಿ ನಡೆಸುತ್ತಿರುವ ಜಾಥಾ ಯಶಸ್ವಿಯಾಗಲಿಎಂದು ಹಾರೈಸಿದರು.
ಕೋಲಾರ ಜಿಲ್ಲಾ ಸಮಗ್ರ ಅಭಿವೃದ್ಧಿಗಾಗಿ ಜನಪರ ವೇದಿಕೆ ಕಾರ್ಯಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಈ ಹಿಂದೆಯೂ ಇದೇ ವೇದಿಕೆಯಿಂದ ರೂಪಿಸಿರುವ ಹೋರಾಟಗಳು ಯಶಸ್ವಿಯಾಗಿ ಗುರಿ ಮುಟ್ಟಿರುವ ನಿದರ್ಶನಗಳಿದ್ದು, ಇದೀಗ ಜಿಲ್ಲೆಯ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟು ಕೊಂಡು ಜಾಥಾ ನಡೆಸಲಾಗುತ್ತಿದ್ದು, ಮುಂದಿನ ಯಾವುದೇ ವೇದಿಕೆಯಲ್ಲಿ ಜಾಥಾದ ಬೇಡಿಕೆಗಳು ಚರ್ಚೆಗೊಳಗಾಗುತ್ತವೆ. ಈ ನಿಟ್ಟಿನಲ್ಲಿ ಪ್ರತಿ ಮನೆ ಮತ್ತು ಮನಸ್ಸುಗಳನ್ನು ಜಾಗೃತಿಯನ್ನುಂಟು ಮಾಡಿ ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸವನ್ನು ಜಾಥಾ ಕಲಾವಿದರು ಮಾಡಬೇಕಾಗಿದೆ. ಆದಿಮ ಪುಣ್ಯಭೂಮಿಯಲ್ಲಿ ಹಾಡುಗಾರರಿಗೆ ತರಬೇತಿ ನೀಡುತ್ತಿರುವುದು ಯಶಸ್ವಿಯಾಗಲಿ ಎಂದರು.
ವೇದಿಕೆ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಜಾಥಾದಲ್ಲಿ ಜನರ ಮುಂದಿಡುವ ಸುಮಾರು ೨೧ ಬೇಡಿಕೆಗಳನ್ನು ಮುಂದೆ ಬರುವ ಯಾವುದೇ ಸರಕಾರ ಈಡೇರಿಸುವಂತ ಒತ್ತಡ ಮತ್ತು ಒತ್ತಾಯವನ್ನು ಜಿಲ್ಲೆಯ ಜನತೆ ಪಕ್ಷಾತೀತ ಹೋರಾಟದ ಮೂಲಕ ಮಾಡುವ ಉದ್ದೇಶದಿಂದ ಜಾಥಾವನ್ನು ಆಯೋಜಿಸಲಾಗುತ್ತಿದೆಯೆಂದು ವಿವರಿಸಿದರು. ಕಲಾವಿದರಿಗೆ ತರಬೇತಿ ನೀಡುವ ಸಲುವಾಗಿ ಆಂಧ್ರಪ್ರದೇಶದಿಂದ ಮಂಗಳರಾಜು, ಪೀಟರ್ ಆಗಮಿಸಿದ್ದು, ಜಿಲ್ಲೆಯ ಐವತ್ತಕ್ಕೂ ಹೆಚ್ಚು ಕಲಾವಿದ ಹಾಡು ಗಾರರು ತರಬೇತಿಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯ ಟಿ.ಎಂ.ವೆಂಕಟೇಶ್, ಮಂಜುನಾಥ್, ವಿಜಯಕೃಷ್ಣ ಇತರರು ಉಪಸ್ಥಿತರಿದ್ದರು.