ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕ್ರಿಯಾಯೋಜನೆ:ಸಚಿವ ಸಿಪಿ ಯೋಗೇಶ್ವರ

ಕಲಬುರಗಿ:ಎ.8:ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಕಲಬುರಗಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಿ, ಮತ್ತಷ್ಟು ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಒದಗಿಸುವ ನಿಟ್ಟಿನಲ್ಲಿ ಹೆಲಿಪೋರ್ಟ್ ಸ್ಥಾಪನೆ, ಪ್ರಮುಖ ಜಲಾಶಯಗಳಲ್ಲಿ ಜಲಕ್ರೀಡೆ ಆರಂಭಿಸುವುದು, ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆಯಿಂದ ಕುಟೀರಗಳನ್ನು ನಿರ್ಮಿಸುವುದು. ಬುದ್ಧವಿಹಾರವನ್ನು ಸೇರಿಸಿ ದೇಶದ ಬೌದ್ಧ ಸರ್ಕೀಟ್‍ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ಬಳ‍್ಳಾರಿ, ವಿಜಯನಗರ ರಾಯಚೂರು ಹಾಗೂ ಕೊಪ್ಪಳ ಸೇರಿದಂತೆ 07 ಜಿಲ್ಲೆಗಳನ್ನೊಳಗೊಂಡ ಪ್ರವಾಸೋದ್ಯಮ ಸರ್ಕೀಟ್‍ನ್ನು ಸ್ಥಾಪಿಸಲು ಪ್ರವಾಸೋದ್ಯಮ ಸಚಿವರಾದ ಶ್ರೀ ಸಿ.ಪಿ.ಯೋಗೇಶ‍್ವರ ರವರು ನಿರ್ಧಾರ ಕೈಗೊಂಡಿದ್ದಾರೆ.

ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಸಿ.ಪಿ.ಯೋಗೇಶ‍್ವರ ರವರು ಎರಡು ದಿನಗಳ ಕಾಲ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಚುರುಕು ಮೂಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಪ್ರವಾಸದಿಂದ ರಾಜಧಾನಿ ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ರಾಜ್ಯ ಪ್ರವಾಸೋದ್ಯಮ ನೀತಿಗೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸ್ಥಾಪಿಸುವ ತಾರಾ ಹೋಟೆಲ್‍ಗಳಿಗೆ ಶೇ.25 ರಷ್ಟು ರಿಯಾಯಿತಿ ಧನ ನೀಡುವುದು, ಕಲಬುರಗಿ ನಗರದಲ್ಲಿ 5 ಎಕರೆ ಪ್ರದೇಶದಲ್ಲಿ ಹೆಲಿಪೋರ್ಟ್‍ ಸ್ಥಾಪನೆ, ಚಂದ್ರಂಪಳ್ಳಿ ಜಲಾಶಯ ಪ್ರದೇಶದಲ್ಲಿ ಜೆ.ಎಲ್.ಆರ್ ವತಿಯಿಂದ ಕುಟೀರಗಳ ನಿರ್ಮಾಣ ಹಾಗೂ ಚಂದ್ರಂಪಳ್ಳಿ ಜಲಾಶಯದಲ್ಲಿ ತೋಟಗಾರಿಕೆ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಗೆ ಪಡೆದುಕೊಳ್ಳುವುದು. ಕಲಬುರಗಿ ಜಿಲ್ಲೆಯ ಭೀರನಹಳ್ಳಿ, ಚಂದ್ರಂಪಳ್ಳಿ, ಭೋಸ್ಗಾ, ಸೊನ್ನ ಮತ್ತು ಅಮರ್ಜಾ ಜಲಾಶಯಗಳಲ್ಲಿ ಜಲಕ್ರೀಡೆಗಳನ್ನು ಆರಂಭಿಸಲು ನಿರ್ಧಾರ ಕೈಗೊಂಡಿದ್ದಾರೆ.

ಬೌದ್ಧ ಧರ್ಮದಲ್ಲಿ ಕಲಬುರಗಿ ವಿಶೇಷ ಸ್ಥಾನಹೊಂದಿದ್ದು, ಸುಮಾರು 70 ಎಕರೆ ಪ್ರದೇಶದಲ್ಲಿ ಬುದ್ಧ ವಿಹಾರ ನಿರ್ಮಾಣ ಮಾಡಿರುವುದು ಒಳಗೊಂಡಂತೆ ಜಿಲ್ಲೆಯ ಸನ್ನತಿಯನ್ನು ದೇಶದ ಬೌದ್ಧ ಸರ್ಕೀಟ್‍ಗೆ ಸೇರ್ಪಡೆಗೊಳಿಸುವ ಬಗ್ಗೆ ಸಹ ನಿರ್ಧಾರ ಕೈಗೊಳ್ಳಲಾಯಿತು.

ಹೆಚ್ಚಿನ ಪ್ರವಾಸಿಗರನ್ನು ಕಲಬುರಗಿ ಕೋಟೆಗೆ ಆಕರ್ಷಿಸಲು ಜಂಗಲ್ ಕಟಿಂಗ್‍ ಹಾಗೂ ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿಯನ್ನು ಪಡೆದು ಪ್ರವಾಸೋದ್ಯಮ ಇಲಾಖೆ ಮತ್ತು ಮಹಾನಗರ ಪಾಲಿಕೆ ವತಿಯಿಂದ ಜಂಟಿಯಾಗಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕಾಮಗಾರಿಗಳಿಗೆ ಚಾಲನೆ ನೀಡುವುದು.

ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ನೀಡಲು ಇಲಾಖೆ ವತಿಯಿಂದ ಒಂದು ಸುಸ್ಸಜ್ಜಿತ ಮಾಹಿತಿ ಕೇಂದ್ರವನ್ನು ಆರಂಭಿಸುವುದು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರವಾಸೋದ್ಯಮ ಇಲಾಖೆಯ ವಿವಿಧ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ಬಳ‍್ಳಾರಿ, ವಿಜಯನಗರ ರಾಯಚೂರು, ಮತ್ತು ಕೊಪ್ಪಳ ಸೇರಿದಂತೆ 07 ಜಿಲ್ಲೆಗಳನ್ನೊಳಗೊಂಡ ಪ್ರವಾಸೋದ್ಯಮ ಸರ್ಕೀಟ್‍ನ್ನು ಸ್ಥಾಪಿಸಲು ಪ್ರವಾಸೋದ್ಯಮ ಸಚಿವರಾದ ಶ್ರೀ ಸಿ.ಪಿ.ಯೋಗೇಶ‍್ವರ ರವರು ನಿರ್ಧಾರ ಕೈಗೊಂಡಿದ್ದಾರೆ.

ಶರಣರ ನಾಡು, ಸೂಪಿ-ಸಂತರ ಭಾವ್ಯಕ್ಯತೆಯ ನೆಲೆವೀಡು, ಬೌದ್ಧ ಜೈನರೊಳಗೊಂಡ ಸರ್ವಭಾಷೆ ಸಂಸ್ಕೃತಿಯ ಸಮನ್ವಯತೆಯ ಪುಣ್ಯಭೂಮಿ. ಮೌರ್ಯ, ರಾಷ್ಟ್ರಕೂಟ, ಯಾದವ, ಹೊಯ್ಸಳ, ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟು ವೈವಿದ್ಯಗಳ ತವರಾಗಿರುವ ಕಲಬುರಗಿ ಪುಟ್ಟಭಾರತವಾಗಿದೆ.

ಧಾರ್ಮಿಕ, ಪಾರಂಪರಿಕ ಹಾಗೂ ಸುಂದರ ಪರಿಸರ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.