ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಿ -ಅಕ್ರಂ ಪಾಷ

ಕೋಲಾರ ಆ.೩-ಕೋಲಾರ ಜಿಲ್ಲೆಯ ನೆನೆಗುದಿಗೆ ಬಿದ್ದಿರುವ ಪ್ರಮುಖ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ಇಲಾಖೆಯು ಜನಮಾನಸವನ್ನು ಮುಟ್ಟುವಲ್ಲಿ ಹಿಂದುಳಿದಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ಅಂತರಗಂಗೆ ಬೆಟ್ಟ, ಚಿಕ್ಕ ತಿರುಪತಿ, ಬಂಗಾರು ತಿರುಪತಿ, ಮೊದಲಾದ ಧಾರ್ಮಿಕ ಹಾಗೂ ಚಾರಣ ಕ್ಷೇತ್ರಗಳಲ್ಲಿ ಆಕರ್ಷಕ ಮಳಿಗೆಗಳು, ಯಾತ್ರಾರ್ತಿಗಳು ಉಳಿದುಕೊಳ್ಳಲು ಯಾತ್ರಿ ನಿವಾಸ ಮುಂತಾದ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಶುದ್ಧ ಕುಡಿಯುವ ನೀರು, ಪ್ರವಾಸಿ ಸ್ಥಳಗಳನ್ನು ತಲುಪುವ ರಸ್ತೆಗಳ ಅಭಿವೃದ್ಧಿ, ಪ್ರಮುಖ ರಸ್ತೆಗಳಲ್ಲಿ ಪ್ರವಾಸಿ ಸ್ಥಳಗಳಿಗೆ ತೆರಳುವ ಮಾರ್ಗ ನಕ್ಷೆಗಳು ಮುಂತಾದ ಅತ್ಯಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದರು.
ವಿಶೇಷವಾಗಿ ಅಂತರಗಂಗೆ ಬೆಟ್ಟವು ಧಾರ್ಮಿಕವಾಗಿ ಹಾಗೂ ಚಾರಣಿಗರ ನೆಚ್ಚಿನ ಪ್ರವಾಸಿ ತಾಣವಾಗಿರುವುದರಿಂದ ಈ ಪ್ರವಾಸಿ ತಾಣವನ್ನು ಆಕರ್ಷಕವಾಗಿ ಮೂಡಿಬರುವಂತೆ ರೂಪಿಸಲು ಕ್ರಿಯಾಯೋಜನೆ ಸಿದ್ದಪಡಿಸಲು ಸೂಚಿಸಿದರು.
ಅಡ್ಡಗಲ್ ಗ್ರಾಮ ಪಂಚಾಯಿತಿ ಕಂಬಾಳಪಲ್ಲಿ, ಯಲ್ದೂರು, ಪುಂಗನೂರು ಕ್ರಾಸ್, ಮದನಹಳ್ಳಿ, ಹೋಳೂರು, ಅಲೇರಿ, ಗುಟ್ಟಹಳ್ಳಿ, ಹನುಮಂತರಾಯನದಿನ್ನೆ, ಚಿಕ್ಕ ತಿರುಪತಿ, ಬೈರಗಾನಪಲ್ಲಿ, ಮುಂತಾದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಯಾತ್ರಿ ನಿವಾಸ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ಶೀಘ್ರವಾಗಿ ಪೂರ್ಣಗೊಳಿಸಬೇಕು ಇದಕ್ಕೆ ಬೇಕಾಗಿರುವ ಅನುದಾನವನ್ನು ಲಭ್ಯವಿರುವ ಲೆಕ್ಕ ಶೀರ್ಷಿಕೆಯಡಿ ಹೊಂದಿಸಿಕೊಳ್ಳಲು ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿದೆ ಎಂದರು.
ಅಂತರಗಂಗೆಯಲ್ಲಿ ಕೂಡು ರಸ್ತೆ ಕಾಮಗಾರಿಗಾಗಿ ಮರ ತೆರವು ಮಾಡಲು ಅರಣ್ಯ ಇಲಾಖೆಯ ಸಹಮತಿ ಪಡೆದು ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಕೋಲಾರ ಜಿಲ್ಲೆಯ ಪ್ರಮುಖ ಮತ್ತು ಅಕರ್ಷಕ ಪ್ರವಾಸಿ ತಾಣಗಳ ವಿವರಗಳುಳ್ಳ ಕಾಫಿ ಟೇಬಲ್ ಪುಸ್ತಕವನ್ನು ಮುದ್ರಿಸುವ ಕಾರ್ಯವು ಸ್ಥಗಿತಗೊಂಡಿದ್ದು, ನೂತನ ಸರ್ಕಾರದ ಆಶಯದಂತೆ ಜನಸಮಾನ್ಯರಿಗೆ ಎಟುಕುವ ರೀತಿಯಲ್ಲಿ ಮುದ್ರಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಕೆ.ಆರ್.ಐ.ಡಿ.ಎಲ್ ಇಇ ಮುನೀರ್, ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ತಿಕ್, ಪ್ರವಾಸೋದ್ಯಮ ಇಲಾಖೆ ಡಾ. ಕೆ.ಎಸ್. ಶ್ರೀನಾಥ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು