
ದಾವಣಗೆರೆ.ಮೇ. ೧೪; ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು, ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಲೋಕಸಭಾ ಕ್ಷೇತ್ರದ ಪೈಕಿ ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಸೇರಿ 7 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಮತದಾರರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.ದಾವಣಗೆರೆ ಅಭಿವೃದ್ಧಿ ಮಾಡಲು ಜನರ ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದದಿಂದ ಅಭಿವೃದ್ಧಿಯಾಗುತ್ತದೆ. ಶೇ 40ರಷ್ಟು ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಜನರನ್ನು ಸ್ಪಂದಿಸದೇ ಸಾಕಷ್ಟು ಜನರು ಬಡವರಾಗಿಯೇ ಉಳಿದಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನಗಳು ಬಂದಿವೆ. ನಾನು ಹಿಂದೆ ಹೇಳಿದಂತೆ ಫಲಿತಾಂಶ ಬಂದಿದೆ. ಕಡಿಮೆ ಸ್ಥಾನಗಳು ಬಂದಿದ್ದರೆ ಕುದುರೆ ವ್ಯಾಪಾರ ಶುರುವಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿ ‘ಸಿಎಲ್‌ಪಿ ಸಭೆಯಲ್ಲಿ ತೀರ್ಮಾನ ಮಾಡಿದ ಬಳಿಕ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸಮಗ್ರ ಭ್ರಷ್ಟಾಚಾರಮುಕ್ತ ಆಡಳಿತ ಕೊಡಬೇಕು. ಮುಖ್ಯವಾಗಿ ನಾವು ಕೊಟ್ಟ ಭರವಸೆಯಂತೆ ಗ್ಯಾರಂಟಿ ಕಾರ್ಡ್ ತಲುಪಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.ಲಿಂಗಾಯತ ಸಿಎಂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹಿರಿಯರು, ಹೋರಾಟ ಮಾಡಿದವರು, ಪಕ್ಷಕ್ಕೆ ದುಡಿದವರು ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.