ಜಿಲ್ಲೆಯ ಕ್ರೆಡಿಟ್ ಯೋಜನೆಯು ಶೇ.10.17ರಷ್ಟು ಹೆಚ್ಚಳ: ಜಿಪಂ ಸಿಇಒ


ಬಳ್ಳಾರಿ,ಮಾ.27 : ಜಿಲ್ಲೆಯ 2023-24 ನೇ ಸಾಲಿನ ಜಿಲ್ಲಾ ಕ್ರೇಡಿಟ್ ಯೋಜನೆ 9,500 ಕೋಟಿಗಳ ಗುರಿ ಇದ್ದು, ಕಳೆದ ವರ್ಷದ ಹಂಚಿಕೆಗಿಂತ ಶೇ.10.17 ರಷ್ಟು ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್‍ನ ನಜೀರ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ವಲಯಗಳ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಒಟ್ಟು ಗುರಿ 2889.36 ಕೋಟಿಗಳಿದ್ದು, ಇದು ಒಟ್ಟು ಜಿಲ್ಲೆಯ ಕ್ರೇಡಿಟ್ ಯೋಜನೆಯ ಶೇ.30.41 ನಷ್ಟಿದೆ. ಜಿಲ್ಲೆಯ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ಎಮ್‍ಎಸ್‍ಇಎಮ್ ವಲಯಕ್ಕೆ 1851.24 ಕೋಟಿಗಳನ್ನು ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್‍ಗಳು ಮತ್ತು ಸರ್ಕಾರ ವಿಭಾಗಗಳ ನಡುವೆ ಉತ್ತಮ ಸಹಕಾರ ಮತ್ತು ಸಮನ್ವಯದೊಂದಿಗೆ ಇಲಾಖೆಗಳು ಕಾರ್ಯ ನಿರ್ವಹಿಸಿದರೆ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ತೋರುವುದು ಕಷ್ಟವೇನಲ್ಲ ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಣ ಕ್ಷೇತ್ರಕ್ಕೆ 45.72 ಕೋಟಿ, ವಸತಿ ಕ್ಷೇತ್ರಕ್ಕೆ 238.44 ಕೋಟಿ ಮೀಸಲಿರಿಸಲಾಗಿದ್ದು,  ರಫ್ತು ಸಾಲ, ಸಾಮಾಜಿಕ ಮೂಲ ಸೌಕರ್ಯ ಇತ್ಯಾದಿಗಳನ್ನು ಹೆಚ್ಚಿಸಲು ಇತರೆ ವಲಯಕ್ಕೆ 142.54 ಕೋಟಿಗಳ ವಿತರಣಾ ಗುರಿ ಇದ್ದು, ಆದ್ಯತಾ ವಲಯಕ್ಕೆ 5240.06 ಕೋಟಿಗಳ ವಿತರಣಾ ಗುರಿಯನ್ನು ನಿಗದಿಪಡಿಸಲಾಗಿದೆ. ಇನ್ನುಳಿದ ಗುರಿಯನ್ನು ಆದ್ಯತೆಗಳಿಲ್ಲದ ವಲಯಕ್ಕೆ ನಿಗದಿಪಡಿಸಿದೆ. ಇದು ಒಟ್ಟು ಜಿಲ್ಲಾ ಕ್ರೇಡಿಟ್ ಯೋಜನೆಯ ಶೇ.5.16 ನಷ್ಠಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಗಳಾದ ಪಿಎಮ್‍ಇಜಿಪಿ, ಪಿಎಮ್‍ಎಫ್‍ಇ, ಎನ್‍ಆರ್‍ಎಲ್‍ಎಮ್, ಎಸ್‍ಎಸ್‍ವೈ, ಆರ್ಟೀಸಾನ್ ಸ್ಕೀಮ್ ಮುಂತಾದ ವಿವಿದ ಸರ್ಕಾರಿ ಪ್ರಯೋಜಿತ ಯೋಜನೆಗಳ ಸಮರ್ಪಕ ಅನುಷ್ಠಾನದ ಕುರಿತು ಚರ್ಚಿಸಿದರು.
ಕೆನೆರಾ ಬ್ಯಾಂಕ್ ವಿವಿಧ ಲೀಡ್ ಬ್ಯಾಂಕ್ ಯೋಜನೆಗಳ ಅಡಿಯಲ್ಲಿ ಅಜೆಂಡಾವಾರು ಪ್ರಗತಿಯನ್ನು ಪ್ರಸ್ತುತ ಪಡಿಸಿದರು.
ಸಭೆಯಲ್ಲಿ ಬೆಂಗಳೂರು ಆರ್‍ಬಿಐ ಎಫ್‍ಐಡಿಡಿ ವಿಭಾಗದ ಎಜಿಮ್, ಪಿ.ಬಿಸ್ವಾಸ್,  ನಬಾರ್ಡ್‍ನ ಡಿಡಿಎಂ ಯುವರಾಜ್‍ಕುಮಾರ್, ಕೆನೆರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ನವೀನ್‍ಕುಮಾರ್.ಎನ್, ಎಸ್‍ಬಿಐ, ಆರ್‍ಬಿಒನ ಪ್ರಾದೇಶಿಕ ವ್ಯವಸ್ಥಾಪಕರಾದ ಲಕ್ಷ್ಮಣ ಸಿಂಹ, ಕೆಜಿಬಿ ಆರ್‍ಒನ ಪ್ರಾದೇಶಿಕ ವ್ಯವಸ್ಥಾಪಕರಾದ ರಮಾನಾಥ ಆಚಾರ್ಯ, ಕೆನೆರಾ ಬ್ಯಾಂಕ್‍ನ ಎಲ್‍ಡಿಎಂ ಸೋಮನಗೌಡ ಐನಾಪೂರ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಜಿಲ್ಲಾ ಸಂಯೋಜಕರು ಮತ್ತು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.