ಜಿಲ್ಲೆಯ ಕೈಗಾರಿಕಾ ಸಮಸ್ಯೆ ಚರ್ಚೆಗೆ ಪ್ರತ್ಯೇಕ ಸಭೆ

ಕಲ್ಯಾಣ ಕರ್ನಾಟಕ : ಬಂಡವಾಳ ಹೂಡಿಕೆ ಯೋಜನೆ
ರಾಯಚೂರು.ಸೆ.01- ಜಿಲ್ಲೆಯ ಕೈಗಾರಿಕಾ ಸಮಸ್ಯೆ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸುವುದಾಗಿ ಹೇಳಿದ ರಾಜ್ಯ ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಗುಲ್ಬರ್ಗಾದಲ್ಲಿ ಹೂಡಿಕೆದಾರರ ಸಭೆ ಕರೆಯಲಾಗಿದೆಂದು ಹೇಳಿದರು.
ಅವರಿಂದು ಜಿಲ್ಲೆ ಕೈಗಾರಿಕೆಗೆ ಸಂಬಂಧಿಸಿ ಸಭೆ ನಿರ್ವಹಿಸಬೇಕಾಗಿತ್ತು. ಆದರೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನ ಹಿನ್ನೆಲೆಯಲ್ಲಿ, ಪೂರ್ವ ನಿಗದಿತ ಸಭೆ ರದ್ದುಗೊಳಿಸಲಾಯಿತು. ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಪ್ರಣಬ್ ಮುಖರ್ಜಿ ಅವರು ಅತ್ಯುತ್ತಮ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಕೈಗಾರಿಕೆ ವಿಶೇಷ ಅಭಿವೃದ್ಧಿಗೆ ಗಮನ ಹರಿಸಲಾಗುತ್ತದೆ.
ಬೆಂಗಳೂರು ಕೇಂದ್ರ ಹೊರತು ಪಡಿಸಿ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಭೆ ನಿರ್ವಹಿಸಲಾಗಿದೆ. ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 2 ಸಾವಿರ ಎಕರೆ ಪ್ರದೇಶ ಮೀಸಲಿರಿಸಲಾಗಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗಿದೆ. 15 ಔಷಧಿ ಕಂಪನಿಗಳು ಕೈಗಾರಿಕಾ ಘಟಕ ಸ್ಥಾಪನೆಗೆ ಸಹಮತಿಸಿವೆ. ಬಲ್ಕ್ ಡ್ರಗ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ಸದಾನಂದಗೌಡ ಅವರಿಗೆ ಪತ್ರ ಬರೆಯಲಾಗಿದೆ.
ಈ ಭಾಗದಲ್ಲಿ ಇದರ ಸ್ಥಾಪನೆಗೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಧಾನಿಯವರು ಇದನ್ನು ಘೋಷಿಸುವುದು ಬಾಕಿಯಿದೆ. ಕಲ್ಯಾಣ ಕರ್ನಾಟಕದಲ್ಲಿ ಗುಲ್ಬರ್ಗಾದಲ್ಲಿ ಸಭೆ ಕರೆಯಲು ಯೋಚಿಸಲಾಗಿದೆ. ಚನ್ನ ಪಟ್ಟಣದ ಆಟಿಕೆ ಸಾಮಾನುಗಳನ್ನು ಬೆಳಗಾವಿಯಲ್ಲಿ ಉತ್ಪಾದಿಸಲಾಗುತ್ತಿದೆ. ಕೊಪ್ಪಳದಲ್ಲಿ ಆಟಿಕೆ ಕೈಗಾರಿಕೆಗಾಗಿ 400 ಎಕರೆ ಸ್ಥಳ ಪಡೆಯಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಭೂಮಿ ಪೂಜೆ ನಡೆಸಲಾಗುತ್ತದೆ. 1500 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 40 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ತ್ರಿವಿಕ್ರಮ ಜೋಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.