
ಕೋಲಾರ,ಏ,೮-ಜಿಲ್ಲೆಯಲ್ಲಿ ರಾಜಕಾರಣ ಕಲುಷಿತಗೊಳ್ಳುವುದಕ್ಕೆ ಶಾಸಕ ರಮೇಶ್ ಕುಮಾರ್ ನಡುವಳಿಕೆ ಕಾರಣ. ಚುನಾವಣೆಯಲ್ಲಿ ಜಾತಿ-ಧರ್ಮಗಳನ್ನ ಎತ್ತಿ ಕಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ಇಂತಹವರಿಗೆ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಚುನಾವಣೆಹತ್ತಿರವಾಗುತ್ತಿದ್ದಂತೆ ಶ್ರೀನಿವಾಸಪುರ ಕ್ಷೇತ್ರದಲ್ಲಿ ದಿನಕ್ಕೊಂದು ಜಾತಿಗಳ ಸಭೆಗಳನ್ನ ಮಾಡುತ್ತಾ ಜನರನ್ನ ಒಬ್ಬರ ಮೇಲೆ ಮತ್ತೊಬ್ಬರನ್ನ ಎತ್ತಿಕಟ್ಟುವ ಕೆಲಸ ಮಾಡುವುದನ್ನ ಬಿಟ್ಟು ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲಿ ಎಂದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬಸ್‌ಗಳನ್ನ ಇಟ್ಟುಕೊಂಡು ನಿಯತ್ತಾಗಿ ದುಡಿಯುತ್ತಿದ್ದಾರೆ. ಅವರ ಬದುಕುವುದನ್ನ ಸಹಿಸದೆ ಅವರ ವೃತ್ತಿಯನ್ನು ಅವಮಾನಿಸಿರುವುದು ಶಾಸಕ ರಮೇಶ್ ಕುಮಾರ್ ವಿಕೃತ ಮನಸ್ಸು ಎಂತಹವುದು ಎಂಬುದು ತೋರಿಸುತ್ತಿದೆ.
ಜೆ.ಕೆ.ವೆಂಕಟಶಿವಾರೆಡ್ಡಿ ಕಳೆದ ೪೦ ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಆದರೆ ಅವರ ವ್ಯಕ್ತಿತ್ವ ಹಾಗೂ ಅವರ ವಿದ್ಯಾಭ್ಯಾಸವನ್ನ ಹಾಗೂ ವೃತ್ತಿಯನ್ನ ಟೀಕೆ ಮಾಡಿರುವುದು ಶಾಸಕ ರಮೇಶ್ ಕುಮಾರ್ ನಡೆಯನ್ನ ತೀವ್ರವಾಗಿ ಬಣಕನಹಳ್ಳಿ ನಟರಾಜ್ ಖಂಡಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಬಾರದೆ ಹೋದರೆ ಕಾಂಗ್ರೆಸ್ ನೆಲಕಚ್ಚುತ್ತದೆ ಎಂದು ಸಿದ್ದರಾಮಯ್ಯರನ್ನ ತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡು ಟಿಕೇಟ್ ಆಕಾಂಕ್ಷಿಗಳ ರಾಜಕೀಯ ಬದುಕಿಗೆ ಬೆಂಕಿ ಇಟ್ಟಿರುವ ರಮೇಶ್ ಕುಮಾರ್ ಇದೀಗ ಚುನಾವಣಾ ಹೊತ್ತಿನಲ್ಲಿ ಜಾತಿಗಳನ್ನ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದಿದ್ದಾರೆ.
ಕಳೆದ ೨೦೧೮ರ ವಿಧಾನಸ ಚುನಾವಣೆಯಲ್ಲಿ ಒಂದು ವರ್ಷದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯ ನೀರನ್ನ ಹರಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಒಂದು ಹನಿ ನೀರು ಕೊಟ್ಟಿಲ್ಲ, ಈ ಯೋಜನೆ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳು ಯಾರ ಜೇಬು ಸೇರಿದೆ ಎಂದು ಪ್ರಶ್ನಿಸಿದ್ದಾರೆ.
ಕೆ.ಸಿ ವ್ಯಾಲಿ ಯೋಜನೆಯಿಂದ ಕೆಮಿಕಲ್ ಮಿಶ್ರಿತ ನೀರನ್ನ ಕೊಟ್ಟು ಕೆರೆಗಳನ್ನ ತುಂಬಿಸಿ ಜನಸಾಮಾನ್ಯರು, ಧನಕರುಗಳು, ರೈತರ ಬದುಕಿಗೆ ಜೊತೆಗೆ ಚೆಲ್ಲಾಟವಾಡುತ್ತುರುವ ರಮೇಶ್ ಕುಮಾರ್‌ರಿಗೆ ಕೋಲಾರ ಜಿಲ್ಲೆಯ ಜನರ ಶಾಪ ತಟ್ಟುತ್ತದೆ.
೩ನೇ ಹಂತದಲ್ಲಿ ಶುದ್ದೀಕರಣ ಮಾಡಿ ಕೆರೆಗಳಿಗೆ ತುಂಬಿಸುವಂತೆ ರೈತರು, ಸಾರ್ವಜನಿಕರು ಎಷ್ಟೇ ಒತ್ತಾಯ ಮಾಡಿದರು ಬಗ್ಗದ ರಮೇಶ್ ಕುಮಾರ್ ಮತ್ತು ಅವರ ಟೀಮ್ ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆ.ಸಿ.ವ್ಯಾಲಿ ಯೋಜನೆಯ ನೀರನ್ನ ಶುದ್ದೀಕರಣ ಮಾಡುವುದಾಗಿ ಇದೀಗ ಹೇಳುತ್ತಿರುವದಕ್ಕೆ ನಾಚಿಕೆ ಆಗಬೇಕು ಎಂದಿದ್ದಾರೆ.
ಕೆ.ಸಿ ವ್ಯಾಲಿ ನೀರು ಕೊಚ್ಚೆ ನೀರಲ್ಲದೆ ಶುದ್ದೀಕರಣ ನೀರಾ? ಕುಮಾರಣ್ಣ ಅವರು ರಾಮನಗರ, ಮದ್ದೂರು ಮತ್ತು ಮಂಡ್ಯದಲ್ಲಿ ಎಳೆ ನೀರನ್ನ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್ ಅವರು ಅಲ್ಲಿಗೆ ಹೋಗಿ ಅಲ್ಲಿನ ರೈತರನ್ನ ಹೋಗಿ ಯಾರು ಎಳೆ ನೀರು ಕುಡಿಸುತ್ತಿದ್ದಾರೆ ಯಾರು ವಿಷದ ನೀರು ಕುಡಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.
ಕೆ.ಸಿ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಯಾವ್ಯಾವ ರಾಜಕಾರಣಿಗಳು ಎಷ್ಟೆಷ್ಟು ತಿಂದು ತೇಗಿದ್ದಾರೆ ಎಂದು ಜನಕ್ಕೆ ಗೊತ್ತು. ಈ ಬಗ್ಗೆ ತನಿಖೆ ನಡೆದಿಸಿದರೆ ಅವರ ಬಂಡವಾಳ ಬಯಲಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿರುವರು ಮೂರು ತಲೆಮಾರುಗಳಿಗೆ ಆಗುವಷ್ಟು ಸಂಪಾದನೆ ಮಾಡಿಕೊಂಡಿದ್ದೇನೆ ಎಂದು ರಮೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಆದರೆ ನಾನು ಲಂಚವನ್ನು ಪಡೆದಿಲ್ಲ, ಸ್ವಾಭಿಮಾನಕ್ಕೆ ಬದ್ದನಾಗಿದ್ದೇನೆ, ಐಟಿ,ಇಡಿಯವರು ಅಡ್ಡಗಲ್ ಗೆ ಬಂದು ಪರಿಶೀಲನೆ ಮಾಡಿಕೊಳ್ಳಲಿ ಎಂದು ರಮೇಶ್ ಕುಮಾರ್ ಹೇಳಿಕೆ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗಿದೆ ಎಂದಿದ್ದಾರೆ.