ಜಿಲ್ಲೆಯ ಎಲ್ಲ 285 ಉಪ ಕೇಂದ್ರಗಳಲ್ಲೂ ಕೋವಿಡ್-19 ಲಸಿಕೆ: ರಾಮಚಂದ್ರನ್ ಆರ್

ಬೀದರ.ಮಾ.27: ಕೋವಿಡ್-19 ಲಸಿಕೆ ನೀಡುವುದನ್ನು ತೀವ್ರಗೊಳಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಇನ್ಮುಂದೆ ಬೀದರ ಜಿಲ್ಲೆಯ ಎಲ್ಲ 285 ಉಪ ಕೇಂದ್ರಗಳಲ್ಲು ಕೂಡ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಇದುವರೆಗೆ ಕೋವಿಡ್-19 ಲಸಿಕೆಯನ್ನು ಜಿಲ್ಲೆಯ ಬ್ರಿಮ್ಸ್, 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿತ್ತು. ಈಗ ಮುಂದವರೆದು ವಾರಗಳಲ್ಲಿ ಐದು ದಿನ ಜಿಲ್ಲೆಯ ಎಲ್ಲ ಉಪ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆಯನ್ನು ನೀಡಲಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲು ತಿಳಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಇನ್ನೀತರ ಕಡೆಗಳಲ್ಲಿ ನೀಡುವಂತೆ ಉಪ ಕೇಂದ್ರಗಳಲ್ಲಿ ಕೂಡ ಲಸಿಕೆ ನೀಡುವ ಕಾರ್ಯವನ್ನು ದಿನಾಂಕವಾರು ನಿಗದಿಪಡಿಸಿ ಅಚ್ಚುಕಟ್ಟಾಗಿ ನಡೆಸಬೇಕು ಎಂದು ಎಲ್ಲ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೀದರ ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.