
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.9: ಜಿಲ್ಲೆಯಲ್ಲಿ ಈ ಬಾರಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಮಿಷನ್ ಅಮೃತ ಸರೋವರ ಅಭಿಯಾನದಡಿ 78 ಅಮೃತ ಸರೋವರಗಳ- ಜಲಮೂಲ ಪುನಶ್ವೇತನ ಹಾಗೂ ಹೊಸದಾಗಿ ನಿರ್ಮಿಸಲಾಗಿದ್ದು, ಅಮೃತ ಸರೋವರಗಳ ಅಂಗಳದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ಸಕಲ ಸಿದ್ಧತೆ ಕೈಗೊಳ್ಳಲು ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಜಿಲ್ಲೆಯಲ್ಲಿ 100 ಸ್ಥಳಗಳಲ್ಲಿ ಅಮೃತ ಸರೋವರ ನಿರ್ಮಾಣ ಗುರಿ ನಿಗದಿಪಡಿಸಿದೆ. ವಿಜಯಪುರ ಜಿಲ್ಲೆಯ 13 ತಾಲ್ಲೂಕುಗಳಲ್ಲಿ ಕೈಗೊಂಡ 78 ಅಮೃತ ಸರೋವರ ಕಾಮಗಾರಿ ಪೂರ್ಣಗೊಂಡಿದೆ. ಪೂರ್ಣಗೊಂಡ ಎಲ್ಲ ಅಮೃತ ಸರೋವರಗಳಲ್ಲಿ ಈ ಬಾರಿ ಧ್ವಜಾರೋಹಣವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಈ ಬಾರಿ ನನ್ನ ಮಣ್ಣು-ನನ್ನ ದೇಶ ಅಭಿಯಾನ ಕೈಗೊಂಡಿದೆ. ಇದರ ಅಂಗವಾಗಿ ಭೂತಾಯಿಗೆ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ 2023ರ ಅಗಸ್ಟ್ 15 ರೊಳಗೆ ನಿಗದಿತ ಸಮಯಕ್ಕೆ ಪೂರ್ಣಗೊಂಡ ಎಲ್ಲ ಅಮೃತ ಸರೋವರ ಸ್ಥಳಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದು. ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು, ಚುನಾಯಿತ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಕೆರೆ ನೀರು ಬಳಕೆದಾರರ ಸಂಘದ ಸದಸ್ಯರು ಆಹ್ವಾನಿಸಿ,ವಿವಿಧ ಸದಸ್ಯರು, ಯುವಕರು ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಜತೆಗೆ ಜಲ-ಸಂರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತಾಗಿ ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು. ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು ಅಂತಹ ಗ್ರಾಮೀಣ ಆಟಗಳನ್ನು ಆಯೋಜನೆ ಮಾಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ತಿರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಗ್ರಾಮೀಣ ಆಟಗಳಾದ ಲಗೋರಿ, ಹಗ್ಗ ಜಗ್ಗಾಟ, ಖೋ-ಖೋ, ಹಗ್ಗ ಜಿಗಿತ (ರೋಪ್ ಜಂಪಿಂಗ್) ಸೇರಿದಂತೆ ಇತರೆ ಕ್ರೀಡಾ ಚಟುವಟಿಕೆಗಳನ್ನು ಗ್ರಾಮೀಣರ ಸಹಕಾರದಿಂದ ಆಯೋಜಿಸಲಾಗುವುದು.
ಅಮೃತ ಸರೋವರ ತಾಣಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಮಕ್ಕಳಿಗಾಗಿ ಪ್ರಬಂಧ, ಭಾಷಣ, ಚರ್ಚಾಕೂಟ, ರಂಗೋಲಿ, ಚಿತ್ರಕಲೆಯಂತಹ ಸ್ಪರ್ಧಾ ಚಟುವಟಿಕೆಗಳನ್ನೂ ಸಹ ಆಯೋಜಿಸಲಾಗುತ್ತದೆ. ಆಗಸ್ಟ್ 15ರಂದು ಅಮೃತ ಸರೋವರ ಪೂರ್ಣಗೊಂಡ ಗ್ರಾಮಗಳಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡು ಇಡೀ ಗ್ರಾಮದಲ್ಲಿ ಸಂಚರಿಸಿ, ನಂತರ ಅಮೃತ ಸರೋವರ ಸ್ಥಳ ತಲುಪಿ ಮುಕ್ತಾಯವಾಗಲಿದೆ.
ಅರಣ್ಯೀಕರಣ ಹಿನ್ನಲೆಯಲ್ಲಿ ಅಮೃತ ಸರೋವರದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಗ್ರಾಮ ಸಮುದಾಯದ ಸದಸ್ಯರಲ್ಲಿ ಅಮೃತ ಸರೋವರ ಸುತ್ತಮುತ್ತ ಹಾಗೂ ನೀರಿನ ಸ್ವಚ್ಛತೆ ಕಾಪಾಡುವಂತೆ ಸ್ವಚ್ಚತಾ ಪ್ರತಿಜ್ಞಾವಿಧಿ ಬೋಧಿಸುವುದು ಒಳಗೊಂಡಂತೆ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ
ಮುಖ್ಯವಾಗಿ, ಎಲ್ಲಾ ಅಮೃತ ಸರೋವರಗಳ ಸ್ಥಳಗಳಲ್ಲಿ ಶಿಲಾಫಲಕ ನಿರ್ಮಿಸಲಾಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ರಾಜ್ಯ ಪೆÇಲೀಸರು ಸೇರಿದಂತೆ ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ವೀರರ ಹೆಸರು ನಾಮಫಲಕದಲ್ಲಿ ಬರೆಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯಂತ ಉತ್ಸಾಹ ಮತ್ತು ಹೆಮ್ಮೆಯಿಂದ ಪಾಲ್ಗೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.