ಜಿಲ್ಲೆಯ ಎಲ್ಲಾ 2,378 ಮತಗಟ್ಟೆಗಳಲ್ಲಿ ಚುನಾವಣಾ ಧ್ವಜಾರೋಹಣ:ಜಿ.ಪಂ. ಸಿ.ಇ.ಓ. ಭಂವರ್ ಸಿಂಗ್ ಮೀನಾ

ಕಲಬುರಗಿ:ಏ.28:ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಲೋಕಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಲು “ನಮ್ಮ ನಡೆ ಮತಗಟ್ಟೆಯ ಕಡೆ” ಅಭಿಯಾನದ ಅಂಗವಾಗಿ ಭಾನುವಾರದÀಂದು ಕಲಬುರಗಿ ಜಿಲ್ಲೆಯ ಎಲ್ಲಾ 2,378 ಮತಗಟ್ಟೆಯಲ್ಲಿ ಚುನಾವಣಾ ಧ್ವಜಾರೋಹಣ ನೆರವೇರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಗಳು (Assured Minimum Facilities-AMF) ಇರುವ ಕುರಿತು ಖಚಿತಪಡಿಸಿಕೊಂಡು ಚುನಾವಣಾ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗಿದೆ.

ಕಾರ್ಯಕ್ರಮ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ ಮತದಾರರಿಗೆ ಮತಗಟ್ಟೆ ವಿಳಾಸ ತಿಳಿಸುವುದು ಮತ್ತು ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದಕ್ಕೆ ಪ್ರೇರೇಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಂದು ಧ್ವಜಾರೋಹಣ ನೆರವೇರಿಸಿದ ಧ್ವಜವು ಮತದಾನ ನಡೆಯುವರೆಗೂ ಮತಗಟ್ಟೆಯಲ್ಲಿ ಹಾರಾಡಲಿದೆ. ಮತಗಟ್ಟೆಯ ಗುರುತಾಗಿ ಇದು ಬಿಂಬಿತವಾಗಲಿದೆ ಎಂದರು.

34-ಅಫಜಲಪೂರ ವಿಧಾನಸಭಾ ಕ್ಷೇತ್ರದ-251 ಮತಗಟ್ಟೆ, 35-ಜೇವರ್ಗಿ ಮತಕ್ಷೇತ್ರದ 279 ಮತಗಟ್ಟೆ, 40-ಚಿತ್ತಾಪೂರ ಮತಕ್ಷೇತ್ರದ 256 ಮತಗಟ್ಟೆ, 41-ಸೇಡಂ ಮತಕ್ಷೇತ್ರದ 261 ಮತಗಟ್ಟೆ, 42-ಚಿಂಚೋಳಿ ಮತಕ್ಷೇತ್ರದ 242 ಮತಗಟ್ಟೆ, 43-ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದ 290 ಮತಗಟ್ಟೆ, 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರದ 261 ಮತಗಟ್ಟೆ, 45-ಗುಲಬರ್ಗಾ ಉತ್ತರ ಮತಕ್ಷೇತ್ರದ 284 ಮತಗಟ್ಟೆ ಹಾಗೂ ಆಳಂದ ಮತಕ್ಷೇತ್ರದ 254 ಮತಗಟ್ಟೆ ಕೇಂದ್ರಗಳು ಸೇರಿದಂತೆ 2,378 ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಧ್ವಜಾರೋಹಣ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.