ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೊವಿಡ್ ಲ್ಯಾಬ್: ಸಂಸದ ಎ.ನಾರಾಯಣಸ್ವಾಮಿ

ಚಿತ್ರದುರ್ಗ,ಏ.26: ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಲ್ಯಾಬ್ ನಿರ್ಮಾಣ ಮಾಡಲು ಅವಕಾಶ ಇದ್ದು, ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆದ ಕೊವಿಡ್ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿ ಮನೆಗೆ ಕೊವಿಡ್ ಚೆಕ್ ಮಾಡುವ ಅವಶ್ಯಕತೆ ಬಹಳ ಇದೆ ಹಾಗಾಗಿ ಎಲ್ಲಾ ತಾಲ್ಲೂಕಿನ ಜನರು ಜಿಲ್ಲಾ ಕೇಂದ್ರಕ್ಕೆ ಬಂದು ಕೋವಿಡ್ ಚೆಕ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೊವಿಡ್ ಚೆಕ್ ಮಾಡುವ ಲ್ಯಾಬ್ ತೆರೆಯಬೇಕು ಎಂದರು.ಪ್ರತಿ ಹಳ್ಳಿಗಳಲ್ಲೂ ಜನರಿಗೆ ಕೊವಿಡ್ ಚೆಕ್ ಮಾಡಿಸಿ, ವೆಕ್ಸಿನೇಷನ್ ಹಾಕಿಸುವ ಮೂಲಕ  ಗ್ರಾಮಗಳಲ್ಲಿ ಬೋರ್ಡ್ ಹಾಕಿಸಬೇಕು. ಅದೇ ರೀತಿ ಎಲ್ಲಾ ಕಾರ್ಖಾನೆಗಳಲ್ಲಿ ಪ್ರತಿಯೊಬ್ಬ ಕಾರ್ಮಿಕನಿಗೂ ಕೊವಿಡ್ ಚೆಕ್ ಮಾಡಿಸಿ, ವ್ಯಾಕ್ಸಿನೇಷನ್‌ ಹಾಕಿಸಿ ಕಾರ್ಖಾನೆ ಮುಂಭಾಗದಲ್ಲಿ ಬೋರ್ಡ್ ಹಾಕಿಸಬೇಕು ಎಂದು ಸೂಚನೆ ನೀಡಿದರು.ಇತರೆ ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲಿ ಕೊವಿಡ್ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಆದರೂ ಸಂತೆ, ಮಾರುಕಟ್ಟೆಗಳಲ್ಲಿ ಓಡಾಡುವವರು ಮಾಸ್ಕ್ ಗಳನ್ನು ಧರಿಸದೆ ಓಡಾಡುತ್ತಿದ್ದಾರೆ ಏಕೆ ಎಂದು ಪೊಲೀಸ್ ಇಲಾಖೆಗೆ ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ ಜಿ. ಈಗಾಗಲೇ ಮಾಸ್ಕ್ ಧರಿಸದೆ ಓಡಾಡುವವರ ಹಿಡಿದು ದಂಡ ಹಾಕಲಾಗುತ್ತಿದೆ. ಅಲ್ಲದೆ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರಾ ಹಾಗೂ ಮಾಸ್ಕ್ ಧರಿಸಿ ಓಡಾಡುವಂತೆ ಅರಿವು ಮೂಡಿಸುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರಿ, ಜಿಪಂ ಸಿಇಓ ನಂದಿನಿ ದೇವಿ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಉಪಸ್ಥಿತರಿದ್ದರು.