ಜಿಲ್ಲೆಯ ಆಸ್ಪತ್ರೆ : ವೈದ್ಯರು – ಮೂಲಭೂತ ಸೌಕರ್ಯಕ್ಕೆ ಒತ್ತಾಯ

ರಾಯಚೂರು.ಜೂ.೦೩- ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಸರ್ಕಾರದ ಗಮನಕ್ಕಿದ್ದರೂ, ಆದ್ಯತೆ ಮೇರೆಗೆ ಈ ಸಮಸ್ಯೆ ನಿವಾರಿಸುವಲ್ಲಿ ಕ್ರಮ ಕೈಗೊಳ್ಳದಿರುವುದರಿಂದ ಜನ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆಂದು ಮಾಜಿ ಶಾಸಕರು ಹಾಗೂ ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್.ಬೋಸರಾಜು ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಮಾನ್ವಿ ಪಟ್ಟಣದಲ್ಲಿ ೨೦೧೭ ರಲ್ಲಿ ಮಂಜೂರಾದ ತಾಯಿ – ಮಗು ಆಸ್ಪತ್ರೆಯ ೬೦ ಹಾಸಿಗೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸುಮಾರು ೧೩ ಕೋಟಿ ವೆಚ್ಚವಾಗಿದೆ. ಕಳೆದ ಎರಡು ವರ್ಷಗಳಿಂದ ಆರೋಗ್ಯ ಇಲಾಖೆಯಿಂದ ಆಸ್ಪತ್ರೆಗೆ ಬೇಕಾಗಿರುವ ವೈದ್ಯರು ಮತ್ತು ವೈದ್ಯಕೀಯ ಪರಿಕರಗಳನ್ನು ಒದಗಿಸದ ಕಾರಣ, ಆಸ್ಪತ್ರೆ ಕಟ್ಟಡ ನಿರುಪಯುಕ್ತವಾಗಿ ಬಿದ್ದಿದೆ. ಇಡೀ ಜಿಲ್ಲೆಯಲ್ಲಿ ತಾಯಿ-ಮಗುವಿನ ಏಕಮಾತ್ರ ಆಸ್ಪತ್ರೆ ಮಾನ್ವಿಯಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಇಲಾಖೆಯ ಸಚಿವರ ಗಮನಕ್ಕೆ ತಂದರೂ ಏನು ಉಪಯೋಗವಾಗಿಲ್ಲ.
ಅಲ್ಲದೇ, ತಾಲೂಕು ಕೇಂದ್ರವಾದ ಸಿರವಾರದಲ್ಲಿ ೩೦ ಹಾಸಿಗೆಗಳ ಆಸ್ಪತ್ರೆ ೨೦೧೭-೧೮ ನೇ ಸಾಲಿಗೆ ಮಂಜೂರಾಗಿ ಕಟ್ಟಡ ನಿರ್ಮಾಣ ಮುಗಿದಿದೆ. ಸ್ವತಃ ತಾವೇ ಈ ಕಟ್ಟಡ ಉದ್ಘಾಟಿಸಿದ್ದು, ಆದರೆ, ಇಲ್ಲಿವರೆಗೂ ವೈದ್ಯಕೀಯ ಸಿಬ್ಬಂದಿ ನೇಮಕಗೊಳ್ಳದಿರುವುದರಿಂದ ಸಾರ್ವಜನಿಕರಿಗೆ ಇದರ ಅನುಕೂಲ ದೊರೆಯುತ್ತಿಲ್ಲ. ಉಸ್ತುವಾರಿ ಸಚಿವರಾದ ತಾವು ಕೂಡಲೇ ಜಿಲ್ಲೆಯಲ್ಲಿ ವೈದ್ಯಕೀಯ ಸಮಸ್ಯೆಗಳ ನಿವಾರಿಸಬೇಕು ಮತ್ತು ಓಪೆಕ್, ರಿಮ್ಸ್ ಆಸ್ಪತ್ರೆಗಳ ಸಮಸ್ಯೆಗಳನ್ನು ನಿವಾರಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ, ಜಿಲ್ಲೆಯಲ್ಲಿ ಭತ್ತದ ಬೆಳೆ ತೀವ್ರವಾಗಿ ಕುಸಿದಿದೆ. ೭೫ ಕೆಜಿಗೆ ೧೪೦೦ ರೂ. ಬೆಲೆ ದೊರೆಯಬೇಕು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಬೆಲೆ ಕುಸಿತ ರೈತರನ್ನು ತೀವ್ರ ತೊಂದರೆಗೆ ಗುರಿ ಮಾಡಿದೆ. ಕಾರಣ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು. ಭತ್ತ ಖರೀದಿಗೆ ಸರ್ಕಾರ ವಿಧಿಸಿದ ಷರತ್ತುಗಳು ರೈತರಿಗೆ ಯಾವ ರೀತಿಯಲ್ಲಿ ಅನುಕೂಲವಾಗುತ್ತವೆ. ಮತ್ತೇ ಮುಂಗಾರು ಆರಂಭಗೊಂಡಿದೆ. ತುಂಗಭದ್ರಾ ಮತ್ತು ನಾರಾಯಣಪೂರ ಬಲದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಕಾರಣ ರಸಗೊಬ್ಬರ ಮತ್ತು ಬೀಜಕ್ಕೆ ಸಾಕಷ್ಟು ಬೇಡಿಕೆ ಬಂದಿದೆ.
ರೈತ ಸಂಪರ್ಕ ಕೇಂದ್ರ ಮತ್ತು ವಿಎಸ್‌ಎಸ್‌ಎಂ ಕೇಂದ್ರಗಳಿಗೆ ಕ್ರೂಢೀಕರಣ ಮಾಡಲು ಒತ್ತಾಯಿಸಿದ್ದಾರೆ.