ಜಿಲ್ಲೆಯ ಅರ್ಹ ಮತದಾರರ ಅಂತಿಮ ಪಟ್ಟಿ ಪ್ರಕಟಣೆಗೆ ಸಕಲ ಕ್ರಮ ಕೈಗೊಳ್ಳಲು ಸೂಚನೆ

ವಿಜಯಪುರ:ಜ:8: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ಇಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಕ್ರಮ ಕೈಗೊಂಡಿದ್ದು, ಬರುವ ಜನೇವರಿ 18 ರಂದು ಪಾರದರ್ಶಕ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಲು ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಶ್ರೀ ಡಿ.ರಂದೀಪ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತಹಶೀಲ್ದಾರರು, ಚುನಾವಣಾ ಶಾಖೆಯ ಅಧಿಕಾರಿಗಳೊಂದಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ :01-01-2021 ಗೆ ಇದ್ದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ಇಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಕುರಿತು ಸಭೆ ನಡೆಸಿದ ಅವರು ಜಿಲ್ಲೆಯ ಯಾವೊಬ್ಬ ಮತದಾರರು ಮತದಾರರ ಪಟ್ಟಿಯಿಂದ ಹೊರಉಳಿಯಬಾರದು. ಇಂದು ಈವರೆಗೆ ಬಂದಿರುವಂತಹ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಕ್ರಮಕೈಗೊಂಡಿದ್ದು ಮುಂಬರುವ ಜನೇವರಿ 18 ರೊಳಗೆ ಪಾರದರ್ಶಕ, ಮತದಾರರ ಪಟ್ಟಿ ಸಿದ್ಧಪಡಿಸಲು ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಈವರೆಗೆ ಸ್ವೀಕರಿಸಲಾದ ಅರ್ಜಿ ನಮೂನೆ 6,7,8 ಹಾಗೂ 8 ಎ ಗಳಿಗೆ ಸಂಬಂಧಪಟ್ಟಂತೆ ಆಕ್ಷೇಪಣೆಗಳನ್ನು ಪರಿಹರಿಸಿ ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದ ಅವರು ಈ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ತೆರಳಿರುವ ಮತದಾರರು ಮತ್ತು ಬೇರೆ ಜಿಲ್ಲೆಗಳಿಂದ ಈ ಜಿಲ್ಲೆಗೆ ಆಗಮಿಸಿರುವ ಮತದಾರರ ದ್ವಿ ಮತದಾರರ ಚೀಟಿ ಇರದಂತೆ ನೋಡಿಕೊಳ್ಳಬೇಕು. ಆಯಾ ವಿಧಾನಸಭಾ ಮತ್ತು ಮತದಾನ ಕೇಂದ್ರವಾರು ಅನರ್ಹ ಮತದಾರರನ್ನು ತೆಗೆದುಹಾಕಿದ ಬಗ್ಗೆ ಮರುಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಅದರಂತೆ ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಉಳಿಯದಂತೆ ನೋಡಿಕೊಳ್ಳಲು ಇತರೆ ಜಿಲ್ಲೆಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಅಂತರ್ ರಾಜ್ಯ ಗಡಿಭಾಗದ ಮತದಾರರ ದ್ವಿ ನೋಂದಣಿ ಇರದಂತೆ ನೋಡಿಕೊಂಡು ತಕ್ಷಣ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಂದ ಬರುವಂತಹ ಆಕ್ಷೇಪಣೆ ಮತ್ತು ಕುಂದುಕೊರತೆಗಳಿಗೆ ಸಕಾಲಕ್ಕೆ ಸ್ಪಂದಿಸಿ ಪರಿಹರಿಸುವಂತೆ ತಿಳಿಸಿದ ಅವರು ಬರುವ ಜನೇವರಿ 18 ರೊಳಗೆ ಪ್ರಕಟಿಸಬಹುದಾದ ಅಂತಿಮ ಮತದಾರರ ಪಟ್ಟಿ ಕುರಿತು ಅವಶ್ಯಕ ಮತ್ತು ಸೂಕ್ತವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ : ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಮತದಾರರ ಪಟ್ಟಿ ವೀಕ್ಷಕರಾದ ಶ್ರೀ ಡಿ.ರಂದೀಪ ಅವರು ವಿಜಯಪುರ ಹಾಗೂ ನಾಗಠಾಣ ವಿಧಾನ ಸಭಾ ಕ್ಷೇತ್ರಗಳಿಗೆ ಅದಲು ಬದಲು ಆಗಿರುವ ಮತದಾರರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಮತದಾರರು ನೋಂದಣಿ ಮಾಡಿಕೊಂಡಿರುವ ಬಗ್ಗೆ ಖಾತರಿ ಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಕುಂದುಕೊರತೆಗಳನ್ನು ಆಲಿಸಿದರು.

ಸಭೆಗಳಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಉಪವಿಭಾಗಾಧಿಕಾರಿಗಳಾದ ಶ್ರೀ ರಾಹುಲ್ ಸಿಂಧೆ, ರಾಮಚಂದ್ರ ಗಡಾದೆ, ಜಿಲ್ಲೆಯ ತಹಶೀಲ್ದಾರರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಂದ್ರಕಾಂತ ಹಿರೇಮಠ, ಇರ್ಫಾನ್ ಶೇಖ, ಶರಣು ಕುಂಬಾರ ಉಪಸ್ಥಿತರಿದ್ದರು.