ಜಿಲ್ಲೆಯಿಂದ ನಾಲ್ವರು ಕೈ ಶಾಸಕರು

ಯಾರಿಗೆ ಒಲಿಯಲಿದೆ ಸಚಿವಸ್ಥಾನ
ಸಂಜೆವಾಣಿ – ಮೇಟಿಗೌಡ
ರಾಯಚೂರು,ಮೇ.೧೮-
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಜನ ಶಾಸಕರು ಗೆದ್ದು ಬಿಗಿದ್ದಾರೆ, ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಗೆರೆಗೆದರಿದ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಂದು ಹೈಕಮಾಂಡ್ ಘೋಷಣೆ ಮಾಡಿದೆ.
ನಾಲ್ಕು ಜನ ಶಾಸಕರು ಮೇಲ್ನೋಟಕ್ಕೆ ಪ್ರಭಾವಿಗಳೇ ಹಾಗಿದ್ದಾರೆ ಆದರೆ ಎಲ್ಲರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಅದರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಬಹುದು ಒಬ್ಬರಿಗೆ ಯಾವುದಾದರೂ ನಿಗಮದ ಅಧ್ಯಕ್ಷ ಸ್ಥಾನ ಸಿಗಬಹುದು.
ಜಿಲ್ಲೆಯಲ್ಲಿರುವ ನಾಲ್ವರಲ್ಲಿ ಯಾರಿಗೆ ಗೂಟದ ಕಾರು ಸಿಗುತ್ತೆ, ಯಾರಿಗೆ ಸಿಹಿ, ಯಾರಿಗೆ ಕಹಿ ಅನುಭವ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ೫ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಂಪನಗೌಡ ಬಾದರ್ಲಿಯವರು ಸಿದ್ದರಾಮಯ್ಯನವರ ಆಪ್ತರಲ್ಲಿ ಕಾಣಿಸಿಕೊಂಡಿದ್ದಾರೆ, ಇಬ್ಬರ ನಡುವೆ ಅವಿನಾಭಾವ ಸಂಬಂಧ ಜನತಾದಳದಿಂದ ಇಲ್ಲಿಯವರೆಗೂ ಕೂಡ ಇದೆ, ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿ, ಎಂ ಎಸ್ ಐ ಎಲ್ ಅಧ್ಯಕ್ಷ ಸ್ಥಾನ ನೀಡಿ ತೃಪ್ತಿ ಪಡಿಸಲಾಗಿತ್ತು, ಆದರೆ ಈ ಬಾರಿ ಹಾಗೆ ಆಗುವುದಿಲ್ಲ, ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಹಂಪನಗೌಡ ಬಾದರ್ಲಿ ಹಾಗೂ ಅವರ ಬೆಂಬಲಿಗರು ವಿಶ್ವಾಸದಲ್ಲಿದ್ದಾರೆ.
ಮಾನ್ವಿ ಕ್ಷೇತ್ರದಿಂದ ೩ನೇ ಬಾರಿ ಗೆದ್ದಿರುವ ಹಂಪಯ್ಯ ನಾಯಕ್ ಅವರು ಎ ಐ ಸಿ ಸಿ ಕಾರ್ಯದರ್ಶಿಯಾಗಿರುವ ಎನ್ ಎಸ್ ಬೋಸರಾಜ್ ಅವರ ಆಪ್ತರು ಬೋಸರಾಜ್ ಅವರಿಗೆ ಹೈಕಮಾಂಡ್ ಅಲ್ಲಿ ಒಳ್ಳೆಯ ಗೌರವವಿದೆ ಹಾಗಾಗಿ ಹಂಪಯ್ಯ ನಾಯಕ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಕೊಡಿಸುವ ಹುಮ್ಮಸಿನಲ್ಲಿದ್ದಾರೆ, ಹಾಗಾಗಿ ಹಂಪ್ಪಯ್ಯ ನಾಯಕ್ ಹಾಗೂ ಅಭಿಮಾನಿಗಳು ಮಂತ್ರಿ ಸ್ಥಾನ ಸಿಗುತ್ತದೆ ಎಂದು ಎನ್ ಎಸ್ ಬೋಸರಾಜ್ ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ.
ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸತತ ಎರಡನೇ ಬಾರಿ ಶಾಸಕರಾಗಿ ಜಯಗಳಿಸಿದ ಬಸನಗೌಡ ದದ್ದಲ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಬೆಂಬಲ, ಹಾಗೂ ವಾಲ್ಮೀಕಿ ಸಮಾಜದ ಮಠಾಧೀಶರ ಬೆಂಬಲದಿಂದ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಮಂತ್ರಿ ಸ್ಥಾನ ಪಡೆಯುವ ಉತ್ಸಾಹದಲ್ಲಿದ್ದಾರೆ, ಶಕ್ತಿ ಮೀರಿ ಪ್ರಯತ್ನ ಮಾಡುತ್ತಿರುವ ದದ್ದಲ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಆಶ್ಚರ್ಯ ಪಡಬೇಕಿಲ್ಲ.ಮಂತ್ರಿ ಸ್ಥಾನ ಇಲ್ಲವಾದರೆ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ.
ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಜಯ ಗಳಸಿರುವ ಬಸನಗೌಡ ತುರುವಿಹಾಳ್ ಅವರಿಗೆ ಡಿ ಕೆ ಶಿವಕುಮಾರ್ ಅವರ ಬೆಂಬಲವಿದೆ ಬಸನಗೌಡ ಅವರನ್ನ ಸಿದ್ದರಾಮಯ್ಯನವರು ಕೂಡ ವಿಶ್ವಾಸಕ್ಕೆ ತೆಗೆದುಕೊಂಡರೆ ಮಂತ್ರಿ ಸ್ಥಾನ ಸಿಗಬಹುದು, ಇಲ್ಲವಾದರೆ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತದೆ.
ಒಟ್ಟಿನಲ್ಲಿ ಮೇಲ್ನೋಟಕ್ಕೆ ಜಿಲ್ಲೆಯ ನಾಲ್ಕು ಜನ ಶಾಸಕರಲ್ಲಿ ಪ್ರಮುಖವಾಗಿ ಹಂಪನಗೌಡ ಬಾದರ್ಲಿ ಯವರಿಗೆ ಮಂತ್ರಿ ಸ್ಥಾನ ಸಿಗುವ ಲಕ್ಷಣಗಳು ಕಂಡುಬರುತ್ತಿವೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಂಪಯ್ಯ ನಾಯಕ್ ಅಥವಾ ದದ್ದಲ್ ಅವರಿಗೆ ಯಾವುದಾದರೂ ಅಧ್ಯಕ್ಷ ಸ್ಥಾನ ನೀಡಿ ತೃಪ್ತಿಪಡಿಸಬಹುದು.
ಬಸನಗೌಡ ತುರಿವಿಹಾಳ್ ಅವರಿಗೆ ಮಂದಿನ ಸಾರಿ ನಿಮಗೆ ನೀಡುತ್ತೇವೆ ಎಂದು ಹೇಳುವ ಸನ್ನಿವೇಶಗಳು ಕಂಡುಬರುತ್ತಿವೆ.