ಜಿಲ್ಲೆಯಾದ್ಯಂತ ಸರಳ ಕ್ರಿಸ್ಮಸ್ ಆಚರಣೆ

ಮೈಸೂರು, ಡಿ.25: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಜಿಲ್ಲೆಯಾದ್ಯಂತ ಕ್ರಿಸ್ತನ ಜನನ ಸಾರುವ ಕ್ರಿಸ್ಮಸ್ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದ್ದು ನಿನ್ನೆ ರಾತ್ರಿ ಚರ್ಚ್ ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಯಲ್ಲಿ ಪಾಲ್ಗೊಂಡರು. ವಿವಿಧ ಬಡಾವಣೆಗಳಿಂದ ಆಗಮಿಸಿದ ಕ್ರೈಸ್ತ ಬಾಂಧವರು ಕರೋಲ್ ಗೀತೆಗಳನ್ನು ಹಾಡುವ ಮೂಲಕ ಏಸುವಿನ ಗುಣಗಾನ ಮಾಡಿದರು. ಬಿಷಪ್ ಡಾ.ಕೆ. ಎ. ವಿಲಿಯಂ ಅವರು ಸೇಂಟ್ ಫಿಲೋಮಿನಾ ಚರ್ಚ್ ನಲ್ಲಿ ನಡೆದ ಪ್ರಾರ್ಥನೆ ಯ ನೇತೃತ್ವ ವಹಿಸಿದ್ದರು.
ಬಿಷಪ್ ಅವರು ಗೋದಲಿ ಬಳಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸಂಜೆ 7ಗಂಟೆಯಿಂದಲೇ ಪ್ರಾರ್ಥನೆ ಆರಂಭವಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಯಾರೂ ಇಲ್ಲದ ಕಾರಣ ಈ ಬಾರಿ ಕ್ರೈಸ್ತ ಸಮುದಾಯದವರನ್ನು ಹೊರತುಪಡಿಸಿ ಇತರ ಯಾರಿಗೂ ಚರ್ಚ್ ನಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಪ್ರತಿವರ್ಷ ರಾತ್ರಿ 12ಗಂಟೆಗೆ ಕ್ರಿಬ್ ನಲ್ಲಿ ಬಾಲ ಏಸುವಿನ ಮೂರ್ತಿ ಸ್ಥಾಪಿಸಲಾಗುತ್ತಿತ್ತು. ಆದರೆ ಈ ಬಾರಿ ರಾಜ್ಯ ಸರ್ಕಾರ ರಾತ್ರಿ ಕಫ್ರ್ಯೂ ಜಾರಿಗೆ ಮುಂದಾದ ಕಾರಣ ಸಂಜೆ 7ಗಂಟೆಗೆಲ್ಲಾ ಗೋದಲಿಯಲ್ಲಿ ಬಾಲ ಏಸುವಿನ ಮೂರ್ತಿಯನ್ನು ಸ್ಥಾಪಿಸಿ ದೀಪ ಬೆಳಗಿ ಪೂಜಿಸಿ ಪ್ರಾರ್ಥನೆ ಸಲ್ಲಿಸಿದರು. ಜೋಗುಳ ಹಾಡುವ ಮೂಲಕ ಆರಾಧಿಸಿದರು. ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಪ್ರವಚನ ನಡೆಸಿಕೊಟ್ಟರು. ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿಶೇಷ ಪೂಜೆ ಸಲ್ಲಿಸಿದರು.
ಇಂದು ಮುಂಜಾನೆ ಐದುಗಂಟೆಯಿಂದಲೇ ಕ್ರಿಸ್ಮಸ್ ಪೂಜೆ ಆರಂಭವಾಗಿತ್ತು. ಈವರೆಗೆ ನಡೆದ ಎಲ್ಲಾ ಪೂಜೆಗಳಲ್ಲಿಯೂ ದೇಶದಲ್ಲಿ ಕೊರೋನಾ ತೊಲಗಿ ಜನತೆ ಶಾಂತಿ ನೆಮ್ಮದಿಯಿಂದ ಇರುವಂತೆ ಆಗಲೆಂದು ಪ್ರಾರ್ಥಿಸಿದರು. ಬನ್ನಿಮಂಟಪದಲ್ಲಿರುವ ಧೀನರ ಮಾತೆಯ ಚರ್ಚ್, ಮೈಸೂರು ಸೌತ್ ಸೇಂಟ್ ಥೇರೆಸಾ ಚರ್ಚ್, ಜಯಲಕ್ಷ್ಮಿಪುರಂನ ಸಂತ ಜೋಸೆಫ್ ಚರ್ಚ್ ಸೇರಿದಂತೆ ನಗರದಲ್ಲಿರುವ ವಿವಿಧ ಚರ್ಚ್ ಗಳನ್ನು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಯುವಜನತೆ ವಿದ್ಯುದ್ದೀಪಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಕಂಡು ಬಂತು.