ಜಿಲ್ಲೆಯಾದ್ಯಂತ ರಾಗಿ ಹೆಲ್ತ್ ಮಿಕ್ಸ್ ವಿತರಣೆ

ಧಾರವಾಡ,ಫೆ23: ರಾಜ್ಯ ಸರ್ಕಾರವು ಆರಂಭಿಸಿದ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಸಿ.ಇ.ಓ ಸ್ವರೂಪ್ ಟಿ.ಕೆ ಅವರು ಸಾಧನಕೇರಿ ಆದರ್ಶವಿದ್ಯಾಲಯದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯಲು ಉಚಿತವಾಗಿ ನೀಡುತ್ತಿರುವ ಈ ಪೌಷ್ಟಿಕ ರಾಗಿ ಹೆಲ್ತ್ ಮಿಕ್ಸ್ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ನೀಡಲಿದೆ ಎಂದರು.

ಮಕ್ಕಳಲ್ಲಿರುವ ಅಪೌಷ್ಟಿಕ ನಿವಾರಣೆಗೆ ಹಾಗೂ ಸದೃಢ ದೇಹ ಹೊಂದಲು ರಾಗಿ ಮಿಕ್ಸ್ ಉಪಯೋಗವಾಗಲಿದೆ. ವಾರಕ್ಕೆ ಮೂರು ದಿನ ಸೋಮವಾರ, ಬುಧವಾರ, ಶುಕ್ರವಾರ ಜಿಲ್ಲೆಯ ಎಲ್ಲಾ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದೆಂದು ಸಿ.ಇ.ಓ ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್ ಎಸ್ ಕೆಳದಿಮಠ ಸ್ವಾಗತಿಸಿದರು, ಶಿಕ್ಷಣಾಧಿಕಾರಿ ರೂಪ ಪುರವಕರ ರಾಗಿ ಹೆಲ್ತ್ ಮಿಕ್ಸ್ ಕುರಿತು ಮಾತನಾಡಿದರು. ಎಸ್.ಡಿ.ಎಮ್ ಸದಸ್ಯ ರಾಚಯ್ಯ ಹಿರೇಮಠ ಹಾಗೂ ಶಾಲೆಯ ಮುಖ್ಯೊಪಾಧ್ಯಾಯರು ಉಪಸ್ಥಿತರಿದ್ದರು.