ಜಿಲ್ಲೆಯಾದ್ಯಂತ ಮಾಸ್ಕ್ ಕಾರ್ಯಾಚರಣೆ

ಬಳ್ಳಾರಿ, ಏ.19: ನಗರದಲ್ಲಿ ಮಾಸ್ಕ್ ಧರಿಸದಿದ್ರೇ ದಂಡ ಪ್ರಯೋಗದ ಕಾರ್ಯಾಚರಣೆ ನಿನ್ನೆಯೂ ಮುಂದುವರಿದಿದೆ. ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಪಾಲಿಕೆ ಸಿಬ್ಬಂದಿಗೊಡಗೂಡಿ ಸ್ವತಃ ಫಿಲ್ಡಿಗಿಳಿದರು.
ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆ ಮಾರ್ಗ,ತೇರು ಬೀದಿ,ಜೈನ್ ಮಾರುಕಟ್ಟೆ, ಮೋತಿ ಸರ್ಕಲ್ ಸೇರಿದಂತೆ ವಿವಿಧೆಡೆ ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಸ್ಥಳದಲ್ಲಿಯೇ ಅನೇಕರಿಗೆ ದಂಡ ವಿಧಿಸಿದರು. ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಧಾರದ ಮೇರೆಗೆ ಕೆಲ ಅಂಗಡಿಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ಕೂಡ ಇದೇ ಸಂದರ್ಭದಲ್ಲಿ ಜಾರಿ ಮಾಡಿದರು.ಕೆಲ ನಿರ್ಗತಿಕರಿಗೆ ಇದೇ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್ ಅವರು ಮಾಸ್ಕ್ ಗಳನ್ನು ನೀಡಿ,ಇನ್ಮುಂದೆ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು.
ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ದೃಷ್ಟಿಯಿಂದ ಮಾರ್ಕಿಂಗ್ ಮಾಡಬೇಕು. ಮಾಸ್ಕ್ ಧರಿಸದವರನ್ನು ಯಾವುದೇ ಕಾರಣಕ್ಕೂ ಅಂಗಡಿಗಳ ಒಳಗಡೆ ಬಿಟ್ಟುಕೊಳ್ಳಬಾರದು, ಅಂಗಡಿಗಳಲ್ಲಿ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ಕಡ್ಡಾಯವಾಗಿರಬೇಕು ಮತ್ತು ಗ್ರಾಹಕರಿಗೆ ತಪಾಸಣೆ ಮಾಡಿಯೇ ಒಳಬಿಡಬೇಕು. ಸಾಮಾಜಿಕ ಅಂತರ ಪಾಲಿಸಬೇಕು; ಇದು ಎಲ್ಲರ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ಉಲ್ಲಂಘಿಸಿದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಮತ್ತು ಎಫ್‍ಐಆರ್ ದಾಖಲಿಸಲಾಗುವುದು. ಕೋವಿಡ್ ನಿಯಮ ಉಲ್ಲಂಘಿಸುವ ಅಂಗಡಿಗಳಿಗೆ ನಾನ್ ಎಸಿ ಅಂಗಡಿಗಳಿಗೆ 5ಸಾವಿರ ದಂಡ, ಎಸಿ ಸೌಲಭ್ಯವಿರುವ ಅಂಗಡಿಗಳಿಗೆ 10 ಸಾವಿರ ಮತ್ತು ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಹೇಳಿದರು.
ಇದೇ ಸಂದರ್ಭದಲ್ಲಿ ಅನುಮತಿ ಇಲ್ಲದೇ ನಡೆಸುತ್ತಿದ್ದ ಸ್ನೂಕರ್ ಶಾಪ್ ನ್ನು ಪರಿಶೀಲಿಸಿ ಸೀಜ್ ಮಾಡಿದರು. ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸಿದೇ ಓಡಾಡುತ್ತಿದ್ದಲ್ಲಿ 250 ರೂ. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದಿರುವುದಕ್ಕೆ ದಂಡ ವಿಧಿಸುವ ಕಾರ್ಯಾಚರಣೆ ಶುರು ಮಾಡಲಾಗಿದೆ.