ಜಿಲ್ಲೆಯಾದ್ಯಂತ ಭಾರೀ ಮಳೆ : ಗರ್ಭಿಣಿಯನ್ನು ಮಸ್ಕಿ ಹಳ್ಳ ದಾಟಿಸಿದ ಆಂಬ್ಯುಲೆನ್ಸ್

ರಾಯಚೂರು.ಸೆ.೦೮- ಜಿಲ್ಲೆಯಲ್ಲಿ ನಿನ್ನೆ ಮಧ್ಯರಾತ್ರಿ ಸುರಿದ ಮಳೆಗೆ ಗ್ರಾಮೀಣ ಜನ ಜೀವನ ತತ್ತರಿಸಿ ಹೋಗಿದೆ. ಕಳೆದ ೨೪ ಘಂಟೆಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಟ ೫೯ ಮಿ.ಮೀ.ರಿಂದ ಗರಿಷ್ಠ ೧೮೨ ಮಿ.ಮೀ.ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಡೆ ಸಾವಿರಾರು ಎಕರೆ ಜಮೀನು ನೀರು ಪಾಲಾಗಿದೆ.
ತಾಲೂಕಿನ ತುಂಗಭದ್ರಾ ಮತ್ತು ಕೃಷ್ಣಾ ನದಿ ಭಾಗದ ರೈತರು ಬೆಳೆದ ಭತ್ತ, ಹತ್ತಿ ನಷ್ಟಕ್ಕೆ ಗುರಿಯಾಗಿದೆ. ಹೊಲಗಳಲ್ಲಿ ಭಾರೀ ಪ್ರಮಾಣದ ನೀರಿನ ಸಂಗ್ರಹದಿಂದ ರೈತರು ಹತ್ತಾರು ಕೋಟಿ ನಷ್ಟಕ್ಕೆ ಗುರಿಯಾಗಿದ್ದಾರೆ. ಮಸ್ಕಿ ತಾಲೂಕಿನಲ್ಲಿ ಆಂಬ್ಯುಲೆನ್ಸ್ ಮೂಲಕ ಗರ್ಭಿಣಿ ಮಹಿಳೆಯೊಬ್ಬರನ್ನು ಹಳ್ಳ ದಾಟಿಸಿದ ಆತಂಕಕ್ಕಾರಿ ಘಟನೆ ನಡೆಯಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಪರ್ಯಾಯ ಮಾರ್ಗವಿಲ್ಲದೆ ಹಳ್ಳದಲ್ಲಿಯೆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಬ್ಯುಲೆನ್ಸ್ ಚಾಲಕನು ಅತ್ಯಂತ ಜಾಗೃತದಿಂದ ಹಳ್ಳ ದಾಟಿಸುವ ಮೂಲಕ ಮಹಿಳೆ ಸುರಕ್ಷಿತವಾಗಿ ಬದುಕುಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ಘಟನೆ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮೀಣ ಪ್ರದೇಶದ ಜನ ಮಳೆಯಿಂದ ರಾತ್ರಿಯೆಲ್ಲ ಆತಂಕದಲ್ಲಿ ಕಾಲ ಕಳೆಯುವಂತಾಯಿತು. ಅರಷಿಣಗಿ, ಜಾಗೀರ ವೆಂಕಟಾಪೂರು, ಹೊಸಪೇಟೆ ಸೇರಿದಂತೆ ಅನೇಕ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ. ಹಠಾತ್ತನೆ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಳ್ಳುವಂತಾಯಿತು.