ಜಿಲ್ಲೆಯಾದ್ಯಂತ ನಾಗರ ಪಂಚಮಿ ಆಚರಣೆ

ರಾಯಚೂರು,ಆ.೨೧-
ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂದು ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯ, ಜ್ಯೋತಿ ಕಾಲೊನಿ, ಗದ್ವಲ್ ರಸ್ತೆ, ವಾಸವಿನಗರ, ದೇವಿನಗರ ಹರಿಜನವಾಡ, ಏಗನೂರ ಟೆಂಪಲ್, ಪಂಚಮುಖಿ ಕಾಲೋನಿ, ಡ್ಯಾಡಿ ಕಾಲೋನಿ, ಜವಾಹರನಗರ, ಮಡ್ಡಿಪೇಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಹಿಳೆಯರು ದೇವಸ್ಥಾನಗಳ ಎದುರಿನ ನಾಗ ಪ್ರತಿಮೆಗಳಿಗೆ ಹಾಲು ಅಭಿಷೇಕ ಮಾಡಿ, ಅರಿಷಿಣ ದಾರ ಕಟ್ಟಿ ಭಕ್ತಿಯಿಂದ ಪೂಜಿಸುತ್ತಿರುವುದು ವಿಶೇಷವಾಗಿತ್ತು.
ಕೆಲವು ಕಡೆ ಜನರು ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ನಮಿಸಿದರು. ಹಬ್ಬಕ್ಕಾಗಿ ಮಾಡಿರುವ ಅಳ್ಳು, ಉಂಡೆ ಹಾಗೂ ವಿವಿಧ ಸಿಹಿ ಪದಾರ್ಥಗಳನ್ನು ನಾಗ ದೇವತೆಗೆ ನೈವೇದ್ಯ ಮಾಡಿ ಜನರು ಪುಣಿತರಾದರು.