ಜಿಲ್ಲೆಯಲ್ಲೂ ಲಾಕ್ ಡೌನ್ : ಬ್ಯಾರಿಕೇಡ್ ಅಳವಡಿಕೆ ಆರಂಭ

ರಾಯಚೂರು.ಏ.೨೬- ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಧಾರದಂತೆ ನಾಳೆಯಿಂದ ೧೪ ದಿನ ಕರ್ನಾಟಕ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಿನ್ನೆಯೇ ಲಾಕ್ ಡೌನ್ ಸುಳಿವು ದೊರೆತ ಹಿನ್ನೆಲೆಯಲ್ಲಿ ಬಹುತೇಕ ವೃತ್ತ ಮತ್ತು ರಸ್ತೆಗಳಲ್ಲಿ ಶಾಶ್ವತವಾದ ಬ್ಯಾರಿಕೇಡ್ ಹಾಕಲಾಗಿತ್ತು. ನಾಳೆ ರಾತ್ರಿವರೆಗೂ ಎಲ್ಲಾ ಜನರ ಓಡಾಟಕ್ಕೆ ಅವಕಾಶವಿದ್ದು, ನಾಳೆ ರಾತ್ರಿಯಿಂದ ಮುಂದಿನ ೧೪ ದಿನಗಳು ಕಳೆದ ವರ್ಷದ ಲಾಕ್ ಡೌನ್ ಮಾದರಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ೧೪ ದಿನ ಲಾಕ್ ಡೌನ್ ಸಂದರ್ಭದಲ್ಲಿ ಮದ್ಯದ ಅಂಗಡಿಗಳಿಗೆ ಪರವಾನಿಗೆ ಇದ್ದು, ಎಲ್ಲವೂ ಪಾರ್ಸೆಲ್ ರೂಪದಲ್ಲಿ ಕೊಂಡೊಯ್ಯಲು ಸೂಚಿಸಲಾಗಿದೆ. ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತಗೊಳ್ಳಲಿದೆ.
ಅಕ್ಕಪಕ್ಕದ ಜಿಲ್ಲೆಗಳ ಯಾವುದೇ ವಾಹನಗಳಿಗೂ ಅವಕಾಶ ನೀಡುವುದಿಲ್ಲ. ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಭಾರೀ ಸಿದ್ಧತೆ ಮಾಡಿಕೊಂಡಿದೆ. ನಾಳೆಯಿಂದ ಪೊಲೀಸ್ ಅಧಿಕಾರಿಗಳು ಮತ್ತು ಜನರ ಬಗ್ಗೆ ಮತ್ತೇ ಸಂಘರ್ಷ ನಡೆಯಲಿದೆ. ಅಗತ್ಯ ಸಂದರ್ಭ ಹೊರತು ಪಡಿಸಿದರೇ, ಬೇರೆ ಯಾವುದೇ ಕಾರಣಕ್ಕೂ ಓಡಾಟಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಈ ಲಾಕ್ ಡೌನ್ ಅಗತ್ಯವಾಗಿದೆ.
ಈ ಲಾಕ್ ಡೌನ್ ಅವಧಿಯಲ್ಲಿ ಮಸ್ಕಿ ಉಪ ಚುನಾವಣೆಯ ಮತ ಎಣಿಕೆ ಬಗ್ಗೆ ಇನ್ನೂ ಸರ್ಕಾರದ ಸ್ಪಷ್ಟ ಆದೇಶ ಏನೆನ್ನುವುದು ತಿಳಿದು ಬಂದಿಲ್ಲ. ಇಂದು ಸಂಜೆವರೆಗೆ ಜಿಲ್ಲಾಡಳಿತಕ್ಕೆ ಮಾರ್ಗಸೂಚಿಗಳು ಬರಲಿದೆ. ಬಸ್ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ನಾಳೆ ರಾತ್ರಿಯಿಂದ ಯಾವುದೇ ಬಸ್ ಸಂಚಾರ ನಡೆಯುವುದಿಲ್ಲ. ಕಟ್ಟಡ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಿಲ್ಲ. ಮತ್ತು ಸರಕು ಸಾಗಾಣಿಕೆ ವಾಹನಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.