
ಚಿತ್ರದುರ್ಗ ಮಾ. 25; ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದ್ದು, ಜಿಲ್ಲೆಯಲ್ಲಿ 2.87 ಲಕ್ಷ ರೂ. ಗಳ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ, ಅಲ್ಲದೆ ನಿಯಮ ಬಾಹಿರವಾಗಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಹಾಕಲಾಗಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಶೀಘ್ರದಲ್ಲಿಯೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಇದಕ್ಕೂ ಪೂರ್ವದಲ್ಲಿಯೇ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು ಚೆಕ್‍ಪೋಸ್ಟ್‍ಗಳನ್ನು ತೆರೆದು, ತೀವ್ರ ನಿಗಾ ವಹಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಅಂತರರಾಜ್ಯ ಗಡಿ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆದು, ದಿನದ 24 ಗಂಟೆಯೂ ಚೆಕ್‍ಪೋಸ್ಟ್‍ಗಳಲ್ಲಿ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಅಕ್ರಮವಾಗಿ ನಗದು ಸಾಗಾಣಿಕೆ, ಮದ್ಯ ಸಾಗಾಣಿಕೆ ಅಲ್ಲದೆ ಸೀರೆ, ಕುಕ್ಕರ್ ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಹಂಚಿಕೊಂಡಿರುವ ಇತರೆ ರಾಜ್ಯಗಳ ಪ್ರಮುಖ ಅಧಿಕಾರಿಗಳೊಂದಿಗೂ ಈಗಾಗಲೆ ಸಭೆಗಳನ್ನು ನಡೆಸಿ, ಅವರಿಂದಲೂ ತೀವ್ರ ನಿಗಾ ವಹಿಸಲು ಸಹಕರಿಸುವಂತೆ ತಿಳಿಸಲಾಗಿದೆ. ಪೊಲೀಸ್, ಅಬಕಾರಿ, ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಮದ್ಯ ಮತ್ತು ಮಾದಕಗಳ ಸಾಗಾಣಿಕೆ, ನಗದು ಸಾಗಾಣಿಕೆ, ಇತರೆ ಸಾಮಗ್ರಿಗಳ ಸಾಗಾಣಿಕೆ ಹಾಗೂ ದಾಸ್ತಾನು ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 35 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಈಗಾಗಲೆ ಮೊಳಕಾಲ್ಮೂರು ತಾಲ್ಲೂಕಿನ ಯದ್ದಲಬೊಮ್ಮನಹಟ್ಟಿ, ಕಣಕುಪ್ಪೆ, ಚಳ್ಳಕೆರೆ ತಾಲ್ಲೂಕಿನ ಜಾಜೂರು ಮತ್ತು ನಾಗಪ್ಪನಹಳ್ಳಿ ಗೇಟ್. ಹಿರಿಯೂರು ತಾಲ್ಲೂಕಿನ ಮದ್ದಿಹಳ್ಳಿ, ಪಿ.ಡಿ. ಕೋಟೆ ಕ್ರಾಸ್ ಮತ್ತು ಗುಯಿಲಾಳು ಟೋಲ್ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಎಮ್ಮೆಹಟ್ಟಿ ಸೇರಿದಂತೆ ಒಟ್ಟು 08 ಚೆಕ್‍ಪೋಸ್ಟ್‍ಗಳು ಕಾರ್ಯಾರಂಭಗೊಂಡಿವೆ. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಜಿಲ್ಲೆಯಾದ್ಯಂತ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ತಪಾಸಣೆ ಕಾರ್ಯವನ್ನು ತೀವ್ರ ನಿಗಾ ವಹಿಸಿದ್ದು, ಕಳೆದ ಮಾ. 15 ರಿಂದ ಈವರೆಗೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ 81 ಪ್ರಕರಣಗಳನ್ನು ದಾಖಲಿಸಿದ್ದಾರೆ.ಕಳೆದ ಮಾರ್ಚ್ 15 ರಿಂದ ಇದುವರೆಗೆ ಜಿಲ್ಲೆಯಲ್ಲಿ 2.57 ಲಕ್ಷ ರೂ. ಮೌಲ್ಯದ ಒಟ್ಟು 633.97 ಲೀ. ಅಕ್ರಮ ಮದ್ಯ ಹಾಗೂ 30500 ರೂ. ಅಂದಾಜು ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 85258 ರೂ. ಮೌಲ್ಯದ 224.51 ಲೀ. ಅಕ್ರಮ ಮದ್ಯ ಹಾಗೂ 15000 ರೂ. ಮೌಲ್ಯದ 0.514 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 73156 ರೂ. ಮೌಲ್ಯದ 171.99 ಲೀ. ಮದ್ಯ. ಚಿತ್ರದುರ್ಗ ತಾಲ್ಲೂಕಿನಲ್ಲಿ 46823 ರೂ. ಮೌಲ್ಯದ 113.46 ಲೀ. ಮದ್ಯ ಹಾಗೂ 10500 ರೂ. ಮೌಲ್ಯದ 0.541 ಕೆ.ಜಿ. ಮಾದಕ. ಹಿರಿಯೂರು ತಾಲ್ಲೂಕಿನಲ್ಲಿ 22493 ರೂ. ಮೌಲ್ಯದ 55.94 ಲೀ. ಮದ್ಯ ಹಾಗೂ 5000 ರೂ. ಮೌಲ್ಯದ 0.212 ಕೆ.ಜಿ. ಮಾದಕ. ಹೊಸದುರ್ಗ ತಾಲ್ಲೂಕಿನಲ್ಲಿ 11253 ರೂ. ಮೌಲ್ಯದ 24.48 ಲೀ. ಮದ್ಯ. ಹೊಳಲ್ಕೆರೆ ತಾಲ್ಲೂಕಿನಲ್ಲಿ 17991 ರೂ. ಮೌಲ್ಯದ 43.59 ಲೀ. ಮದ್ಯ ವಶಪಡಿಸಿಕೊಂಡು, ಅಕ್ರಮ ಚಟುವಟಿಕೆ ನಡೆಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ವಹಿಸಲಾಗಿದೆ.