ಜಿಲ್ಲೆಯಲ್ಲಿ 18.67 ಲಕ್ಷ ನಗದು, 3.64 ಲಕ್ಷ ಮೌಲ್ಯದ ಮದ್ಯ, ಮಾದಕಗಳ ವಶ

ಚಿತ್ರದುರ್ಗ.ಏ.೧:  ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದ್ದು, ಮಾರ್ಚ್ 31 ರವರೆಗೆ ಜಿಲ್ಲೆಯಲ್ಲಿ ರೂ.18.67 ಲಕ್ಷ ನಗದು, 3.33 ಲಕ್ಷ ರೂ. ಮೌಲ್ಯದ ಒಟ್ಟು 830.97 ಲೀ. ಅಕ್ರಮ ಮದ್ಯ ಹಾಗೂ 30500 ರೂ. ಅಂದಾಜು ಮೌಲ್ಯದ 1.267 ಕೆ.ಜಿ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
      ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಗೆ ಜಾರಿಯಲ್ಲಿರುವುದರಿಂದ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು ಜಿಲ್ಲೆಯಾದ್ಯಂತ 35 ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸುತ್ತಿವೆ. ದಿನದ 24 ಗಂಟೆಯೂ ಚೆಕ್‍ಪೋಸ್ಟ್‍ಗಳಲ್ಲಿ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಅಕ್ರಮವಾಗಿ ನಗದು ಸಾಗಾಣಿಕೆ, ಮದ್ಯ ಸಾಗಾಣಿಕೆ ಅಲ್ಲದೆ ಸೀರೆ, ಕುಕ್ಕರ್ ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.  ಮಾ. 31 ರಂದು ಹಿರಿಯೂರು ತಾಲ್ಲೂಕಿನಲ್ಲಿ ದಾಖಲೆ ಇಲ್ಲದ 2.70 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.
 ರೂ.18,67,700 ನಗದು ವಶ: ಈವರೆಗೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ರೂ.1102700 ನಗದು, ಹಿರಿಯೂರು ತಾಲ್ಲೂಕಿನಲ್ಲಿ ರೂ.5,45,000 ನಗದು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ರೂ.2,20,000 ಸೇರಿದಂತೆ ಒಟ್ಟು ರೂ.18,67,700 ನಗದು ವಶ ಪಡಿಸಿಕೊಳ್ಳಲಾಗಿದೆ.