ಜಿಲ್ಲೆಯಲ್ಲಿ 1 ಮಲೇರಿಯಾ ಪ್ರಕರಣಗಳು ಪತ್ತೆಯಾಗಿಲ್ಲ: ಪಾಟಿಲ

ಬೀದರ:ಜೂ.10: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಂದೂ ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ. ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ವಿಡಿಯೊ ಸಂವಾದದ ಮೂಲಕ ನಡೆದ ಜಿಲ್ಲಾಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸಂಜೀವಕುಮಾರ ಪಾಟೀಲ ಈ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2018 ರಲ್ಲಿ 22, 2019 ರಲ್ಲಿ 16 ಹಾಗೂ 2020 ರಲ್ಲಿ 3 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು ಎಂದು ಹೇಳಿದರು.

2020 ರಲ್ಲಿನ ಮೂರೂ ಪ್ರಕರಣಗಳು ಹೊರ ರಾಜ್ಯಗಳಿಂದ ವಲಸೆ ಬಂದವರಲ್ಲಿ ಕಂಡು ಬಂದಿವೆ. ಚಿಕಿತ್ಸೆ ಮೂಲಕ ಎಲ್ಲರನ್ನೂ ಗುಣಪಡಿಸಲಾಗಿದೆ. ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದರು.2025 ರ ವೇಳೆಗೆ ರಾಜ್ಯದಲ್ಲಿ ಮಲೇರಿಯಾ ಸಂಪೂರ್ಣ ನಿವಾರಣೆ ಗುರಿ ನಿಗದಿಪಡಿಸಲಾಗಿದೆ. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಡಿಡಿಟಿ ಸಿಂಪರಣೆ, ಜ್ವರ ಪೀಡಿತರ ಸಮೀಕ್ಷೆ, ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ನಿಯಂತ್ರಣ ಕ್ರಮಗಳಲ್ಲಿ ಸೇರಿವೆ ಎಂದು ತಿಳಿಸಿದರು.

ತೀವ್ರ ಜ್ವರ, ಮೈ ಕೈ ನೋವು, ತೀವ್ರ ತರ ತಲೆ ನೋವು, ಮೈ ಬೆವರುವುದು, ಬಿಟ್ಟು ಬಿಟ್ಟು ಚಳಿಯಾಗುವುದು, ರಕ್ತ ಹೀನತೆ, ಕೆಲ ಸಂದರ್ಭಗಳಲ್ಲಿ ವಾಂತಿ ಆಗುವುದು ಮಲೇರಿಯಾ ಲಕ್ಷಣಗಳಾಗಿವೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಪರೀಕ್ಷೆ ವ್ಯವಸ್ಥೆ ಇದೆ. ಯಾವುದೇ ಜ್ವರವಿದ್ದಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬಹುದು. ಮಲೇರಿಯಾ ದೃಢಪಟ್ಟಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗದಗೆಪ್ಪ ಕುಕೋಟೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಟಿ.ಆರ್. ದೊಡ್ಡೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ, ತಹಶೀಲ್ದಾರ್ ಗಂಗಾದೇವಿ, ಡಾ. ಭೀಮಾಶಂಕರ ಬಿ, ಗೌತಮ ಅರಳಿ, ಡಾ. ಶರಣಯ್ಯ ಸ್ವಾಮಿ ಇದ್ದರು.