ಜಿಲ್ಲೆಯಲ್ಲಿ `ಹೆರಿಟೆಜ್ ಹೋಮ್ ಸ್ಟೇ’ ಆರಂಭಿಸಲು ಪ್ರೋತ್ಸಾಹ – ಪಾಂಡೆ

ಧಾರವಾಡ, ಮಾ. 25: ಧಾರವಾಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದು, ಹುಬ್ಬಳ್ಳಿಯಲ್ಲಿ ಹೆಲಿಪೋರ್ಟ್ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಿಸಲು ಮತ್ತು ಧಾರವಾಡ ಜಿಲ್ಲೆಯಲ್ಲಿ ಹೆರಿಟೆಜ್ ಹೋಮ್ ಸ್ಟೇ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‍ಕುಮಾರ ಪಾಂಡೆ ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ದೇಶದ ವಿವಿಧ ಪ್ರಮುಖ ನಗರಗಳಿಂದ ಹುಬ್ಬಳ್ಳಿಗೆ ನೇರ ವಿಮಾನ ಸಂಪರ್ಕವಿರುವುದರಿಂದ ಹುಬ್ಬಳ್ಳಿಯಲ್ಲಿ ಹೆಲಿ ಪೊರ್ಟ್ ಸ್ಥಾಪನೆ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಭಾರತ ಸರ್ಕಾರದ ವುಡಾನ್ ಯೋಜನೆ ನೆರವಾಗುತ್ತಿದೆ. ಮುಂಬೈ, ಮಂಗಳೂರು ಭಾಗದಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರಿಗೆ ಸೂಕ್ತ ಮೂಲಸೌಲಭ್ಯ ಹಾಗೂ ಉತ್ತಮ ಪ್ರವಾಸಿ ಸೌಲಭ್ಯ ನೀಡುವುದು ಇಲಾಖೆಯ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಟೂರಿಸಂ ಸೊಸೈಟಿ ರಚನೆ ಆಗುತ್ತಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲರ ಸಹಕಾರದಿಂದ ಈ ಸೊಸೈಟಿ ಮೂಲಕ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಅವುಗಳ ಜನಪ್ರಿಯತೆಗೆ ಯೋಜನೆ ರೂಪಿಸಲಾಗುವುದು.

ಜಿಲ್ಲೆಯಲ್ಲಿ `ಅಗ್ರಿ ಟೂರಿಸಂ’ ಬೆಳೆಸಲು ಯೋಜನೆ ರೂಪಿಸಲಾಗುತ್ತಿದೆ. ಸಾಧನಕೇರಿ, ಕೆಲಗೇರಿಕೆರೆ, ಉಣಕಲ್ ಕೆರೆ ಹಾಗೂ ನೀರಸಾಗರ ಕೆರೆಗಳನ್ನು ಅಭಿವೃದ್ಧಿಪಡಿಸಿ, ಉತ್ತಮ ಪ್ರವಾಸಿ ತಾಣಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಉಣಕಲ್ ಕೆರೆಯಲ್ಲಿ ಜಲಕ್ರೀಡೆಗೆ ಅಗತ್ಯವಿರುವ ಸಲಕರಣೆ, ಯಂತ್ರಗಳನ್ನು ನೀಡಿ ಪ್ರೋತ್ಸಾಹಿಸಬೇಕು ಮತ್ತು ನೀರಸಾಗರದಲ್ಲಿ ವಾಟರ್ ಪಾರ್ಕ್ ನಿರ್ಮಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದು ಎಂದರು.

ಕೇಂದ್ರ ಸರ್ಕಾರದ ಒಂದು ಜಿಲ್ಲೆ-ಒಂದು ಬೆಳೆ ಯೋಜನೆಯಡಿ ಜಿಲ್ಲೆಗೆ ಮಾವು ಬೆಳೆ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಮಾವು ಬೆಳೆಗಾರರ ಸಂಖ್ಯೆಯು ಹೆಚ್ಚಿದೆ. ಆದ್ದರಿಂದ ಧಾರವಾಡ ಜಿಲ್ಲೆಯಲ್ಲಿ ಅಗ್ರಿ ಟೂರಿಸಂದೊಂದಿಗೆ ಮ್ಯಾಂಗೋ ಟೂರಿಸಂ ಬೆಳೆಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನೃಪತುಂಗ ಬೆಟ್ಟದಲ್ಲಿ ರೋಪ್ ವೇ ಜೊತೆಗೆ ಅಡ್ವೆಂಚರ್ಸ್ ಚಟುವಟಿಕೆ ಹಮ್ಮಿಕೊಳ್ಳಲು ಮತ್ತು ಯಮನೂರು ಪ್ರವಾಸಿ ತಾಣ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ನೆರವು ಅಗತ್ಯವಿದೆ. ಹುಬ್ಬಳ್ಳಿ- ಧಾರವಾಡ ಅವಳಿನಗರಗಳು ಚಿತ್ರಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ ಮತ್ತು ಜಾನಪದ ಕಲೆಗಳಿಗೆ ಹೆಸರಾಗಿವೆ. ಮತ್ತು ವಿವಿಧ ಟ್ರಸ್ಟ್‍ಗಳು ಸ್ಥಾಪನೆಯಾಗಿವೆ. ಇವುಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಒಂದೇ ಸೂರಿನಡಿ ತರಲು ಧಾರವಾಡ ನಗರದ ಹೃದಯಭಾಗದಲ್ಲಿರುವ ಸಪ್ತಾಪುರದ ಸರ್ಕಾರಿ ಜಮೀನಿದಲ್ಲಿ ಕಲಾಗ್ರಾಮ ಸ್ಥಾಪಿಸಲು ಯೋಜನೆ ಸಿದ್ಧಗೊಳಿಸಲಾಗಿದೆ. ಈ ಪ್ರಸ್ತಾವನೆಗೆ ಪ್ರವಾಸೋದ್ಯಮ ಇಲಾಖೆಯೂ ಆರ್ಥಿಕ ಅನುದಾನ ನೀಡಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಾರ್ಯಾದರ್ಶಿಗಳಲ್ಲಿ ವಿನಂತಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ. ಬಿ., ಧಾರವಾಡ ತಹಶೀಲ್ದಾರ ಡಾ. ಸಂತೋಷ ಬಿರಾದಾರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.