
ಚಾಮರಾಜನಗರ, ಮೇ. 11:- ವಿಧಾನಸಭಾ ಚುನಾವಣೆಗೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ಸಾಹದಿಂದ ಮತದಾರರು ಮತ ಚಲಾಯಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಶೇ.81.48 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 861489 ಮತದಾರರಿದ್ದು, ಈ ಪೈಕಿ 701977 ಮತದಾರರುತಮ್ಮ ಹಕ್ಕು ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.80.02 ರಷ್ಟು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.75 ರಷ್ಟು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.81.95 ರಷ್ಟು ಹಾಗೂ ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರದಲ್ಲಿ ಶೇ. 87.33 ರಷ್ಟು ಮತದಾನವಾಗಿದೆ.
ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಸ್ಟ್ರಾಂಗ್‍ರೂಂನಲ್ಲಿ ಭದ್ರವಾಗಿದೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ವಿರುದ್ಧ ಬಿಜೆಪಿಯಿಂದ ಸಚಿವ ವಿ. ಸೋಮಣ್ಣ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಿಂದ ಈ ಕ್ಷೇತ್ರರಾಜ್ಯದಲ್ಲಿ ತೀವ್ರಕುತೂಹಲ ಕೆರಳಿಸಿದೆ. ಕಳೆದ ಮೂರು ಬಾರಿ ನಿರಾಯಸವಾಗಿ ಗೆಲವು ಸಾಧಿಸಿದ್ದ ಪುಟ್ಟರಂಗಶೆಟ್ಟಿರವರಿಗೆ ಈ ಬಾರಿ ವಿ. ಸೋಮಣ್ಣರವರಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಯಾರೇ ಗೆಲುವ ಸಾಧಿಸಿದರೂ ಗೆಲುವಿನ ಅಂತರ ಮಾತ್ರ ತುಂಬಾ ಕಡಿಮೆ ಇರುವುದು ನಿನ್ನೆ ನಡೆದ ಮತದಾನದ ನಂತರದ ಸಮೀಕ್ಷೆಗಳು ತಿಳಿಸಿದೆ.
ಇನ್ನೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಎಸ್‍ಪಿಯಿಂದ ಗೆಲವು ಸಾಧಿಸಿ ನಂತರ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ ಶಾಸಕ ಎನ್. ಮಹೇಶ್ ರವರಿಂದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ತೀವ್ರ ಪೈಪೋಟಿ ಎದುರುದಾಗಿದೆ. ಏಕೆಂದರೆ ಕಳೆದ ಬಾರಿಎನ್. ಮಹೇಶ್‍ರವರು ಸತತ ಸೋಲಿನಿಂದ ಕಂಗೆಟ್ಟಿದ್ದರಿಂದ ಅನುಕಂಪದ ಅಲೆ ಮತ್ತು ಬಿಜೆಪಿಯಲ್ಲಿದ್ದ ಜಿ.ಎನ್. ನಂಜುಂಡಸ್ವಾಮಿರವರ ಬೆಂಬಲ ಜೊತೆಗೆ ಬಿಎಸ್‍ಪಿಯ ಮತಗಳು ಸಾರಸಗಟಾಗಿ ಎನ್. ಮಹೇಶ್‍ಗೆ ಒಲಿದು ಗೆಲವು ಸಾಧಿಸಿದ್ದರು.
ಆದರೆ ಈ ಬಾರಿ ಟಿಕೆಟ್ ದೊರೆಯದ ಕಾರಣ ಜಿ.ಎನ್. ನಂಜುಂಡಸ್ವಾಮಿರವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಎ.ಆರ್.ಕೃಷ್ಣಮೂರ್ತಿರವರಿಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಬಿಎಸ್‍ಪಿಯು ಸಹ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ಘೊಷಿಸಿದ್ದಾರೆ. ಅಲ್ಲದೆಎ.ಆರ್. ಕೃಷ್ಣಮೂರ್ತಿಯವರು ಸಹ ಈ ಹಿಂದೆಒಂದು ಮತದಿಂದ ಸೋಲು ಅನುಭವಿಸಿದ ನಂತರ ನಡೆದಎಲ್ಲಾ ಚುನಾವಣೆಗಳಲ್ಲಿಯೂ ಪರಾಜಿತಗೊಳ್ಳುತ್ತಾ ಬಂದಿದ್ದಾರೆ. ಕಳೆದ ಬಾರಿ ಮಹೇಶ್ ರವರಿಗೆದೊರೆತ ಅನುಕಂಪದಅಲೆಯು ಈ ಬಾರಿ ಎ.ಆರ್.ಕೃಷ್ಣಮೂರ್ತಿರವರಿಗೆ ಹಲವು ಕಡೆದೊರೆತಿರುವುದರಿಂದ ಮತ್ತು ಜೆಡಿಎಸ್ ಅಭ್ಯರ್ಥಿ ನಿವೃತ್ತ ಪೋಲಿಸ್ ಅಧಿಕಾರಿ ಪುಟ್ಟಸ್ವಾಮಿರವರು ಮತದಾನಕ್ಕೆ ಅಂತಿಮ ಕ್ಷಣದಲ್ಲಿ ಪ್ರಚಾರದಿಂದ ದೂರ ಉಳಿದು ಜೆಡಿಎಸ್ ಕಾರ್ಯಕರ್ತರಿಗೆ ಸಿಗದೆ ದೂರವುಳಿದಿದ್ದರಿಂದ ಹಲವು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿರುವುದು ಸಹ ಎನ್. ಮಹೇಶ್‍ಗೆ ತಲೆನೋವಾಗಿದೆ.
ಹಾಗೆಯೇ ಹನೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಆರ್. ನರೇಂದ್ರ, ಬಿಜೆಪಿ ಅಭ್ಯರ್ಥಿ ಡಾ|| ಪ್ರೀತನ್ ನಾಗಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತದಾನದ ನಂತರ ಮೇಲ್ನೋಟಕ್ಕೆ ಶಾಸಕ ಆರ್. ನರೇಂದ್ರ ಮತ್ತು ಡಾ|| ಪ್ರೀತನ್ ನಾಗಪ್ಪ ಕುಟುಂಬಗಳ ಜಿದ್ದಾಜಿದ್ದಿ ನಡುವೆ ಕಳೆದ ಬಾರಿ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಮಂಜುನಾಥ್‍ಗೆ ಜಯಮಾಲೆ ದೊರೆಯಬಹುದು ಎಂದು ಕ್ಷೇತ್ರದ ಕೆಲವು ಜನರ ಬಾಯಿಂದ ಕೇಳಿಬರುತ್ತಿದೆ.
ಗುಂಡ್ಲುಪೇಟೆಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಎಸ್. ನಿರಂಜನ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ನಡುವೆ ಭಾರಿ ಪೈಪೋಟಿ ನಡೆದಿದ್ದು, ಎಸ್. ನಿರಂಜನ್‍ಕುಮಾರ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಲ್ಲದೆ ಗಣೇಶ್‍ಪ್ರಸಾದ್‍ಗೆ ಮಾಜಿ ಸಚಿವ ದಿವಂಗತ ಹೆಚ್.ಎಸ್. ಮಹದೇವಪ್ರಸಾದ್‍ರವರ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ ಆಗಿದ್ದು, ಅನುಕಂಪದ ಅಲೆಯು ಸಹ ಅವರಿಗೆ ನೆರವಾಗಲಿದೆ.
ಒಟ್ಟಾರೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ ಯಾರಿಗೆ ಮತದಾರರ ಒಲವು ಇದೆ ಎಂಬುದು ಮೇ 13 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ.