ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿ: ಟಿ. ಭೂಬಾಲನ್

ವಿಜಯಪುರ ಸೆ.09: ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರ ಮತ್ತು ಗ್ರಾಮೀಣ ಭಾಗದ ಅಂಗನವಾಡಿ ಕೆಂದ್ರಗಳ ಆಶಾ ಕಾರ್ಯಕರ್ತೆಯರು ಸಹಕರಿಸಿ, ಜವಾಬ್ದಾರಿಯುತವಾಗಿ ಅಗತ್ಯವಾದ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಟಿ. ಭೂಬಾಲನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳನ್ನೊಳಗೊಂಡ ಸಮಿತಿ ಸಭೆಯನ್ನು ಹಮ್ಮಿಕೊಂಡಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿದ 2023ರ ಎಪ್ರೀಲ್‍ನಿಂದ ಜುಲೈ ತಿಂಗಳವರೆಗಿನ ತಾಯಿ ಮರಣ ಪರಿಶೋಧನೆ, ಮಕ್ಕಳ ಮರಣ ಪರಿಶೋಧನೆ ಮತ್ತು ಮಿಷನ್ ಇಂಧ್ರ ಧನುಷ್ 5.0ದ 2ನೇ ಸುತ್ತಿನ ಜಿಲ್ಲಾ ಲಸಿಕಾ ಕಾರ್ಯ ಪಡೆ(ಡಿಟಿಎಫ್‍ಐ) ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಲಸಿಕೆಗಳನ್ನು ನೀಡಾಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ ಎಲ್ಲ ಮಕ್ಕಳನ್ನು ಪೋಷಕರು ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಲಸಿಕೆ ಪಡೆಯಬಹುದು ಅಥವಾ ಗ್ರಾಮದ/ವಾರ್ಡಿನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂರ್ಪಕಿಸಿ ಮಾಹಿತಿ ಪಡೆಯಬೇಕೆಂದು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಎಲ್ಲಾ ತಾಲೂಕಾ ಆರೋಗ್ಯಾಧಿಕಾರಗಳು ಕ್ರಮ ವಹಿಸಬೇಕೆಂದು ಹಾಗೂ ನಮ್ಮ ಜಿಲ್ಲೆಯಲ್ಲಿ ಒಟ್ಟು ಲಸಿಕಾ ಕೇಂದ್ರಗಳು-654 ಇದ್ದು, 0-2 ವರ್ಷದ ಮಕ್ಕಳು-8207, 2-5 ವರ್ಷದ ಮಕ್ಕಳು-2394, ಗರ್ಭಿಣಿಯರು-2101 ಎಲ್ಲ ಫಲಾನುಭವಿಗಳಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಹುಟ್ಟಿದ ಶಿಶುವಿನಿಂದ 5 ವರ್ಷದೊಳಗಿನ ಮಕ್ಕಳಿಗೆ ನಾನಾ ಕಾಯಿಲೆಗಳಿಂದ ರಕ್ಷಣೆ ನೀಡಲು ಒಟ್ಟು 11 ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಆದರೆ ನಿಗದಿತ ಅಂತರದಲ್ಲಿ ನೀಡುವ 11 ಲಸಿಕೆಗಳ ಪೈಕಿ ಕೆಲ ಮಕ್ಕಳು ಒಂದಿಷ್ಟು ಲಸಿಕೆ ಪಡೆದು ಕೊಂಡಿರುವದಿಲ್ಲಾ ಅಂತಹ ಮಕ್ಕಳನ್ನು ಜಿಲ್ಲೆಯ ಮತ್ತು ತಾಲ್ಲೂಕಗಳಲ್ಲಿ 2ನೇ ಸುತ್ತಿನ ಸಪ್ಪೆಂಬರ 11 ರಿಂದ 16 ವರೆಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ 5.0 ಉಚಿತ ಲಸಿಕೆ ನೀಡಲು ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರು ಎಂ.ಬಿ. ಬೋರಣ್ಣನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಕೆ ಕೆ ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಬಸವರಾಜ ಹುಬ್ಬಳ್ಳಿ, ಎಸ್.ಎಮ್.ಓ (ಡಬ್ಲ್ಯ.ಹೆಚ್.ಓ) ಅಧಿಕಾರಿಗಳಾದ ಡಾ.ಮುಕುಂದ ಗಲಗಲಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಕೆ.ಡಿ. ಗುಂಡಬಾವಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜೇಶ್ವರಿ ಗೊಲಗೇರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ: ಸಂಪತ ಗುಣಾರಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ. ಜೈಬುನಿಸಾ ಬೀಳಗಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಡಾ. ಕವಿತಾ ದೊಡಮನಿ, ಎಲ್ಲಾ ತಾಲೂಕಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಎಮ್ ಕೊಲೂರ, ಮಾಹದೇವ ನಿಲಂಗಿ ಡಿ.ಪಿ.ಎಮ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು.