ಜಿಲ್ಲೆಯಲ್ಲಿ ರಾಜ್ಯದ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಘೋಷಣೆ

ಕಲ್ಯಾಣ ಕರ್ನಾಟಕ ಸಿರಿಧಾನ್ಯ ಅಭಿವೃದ್ಧಿಗೆ ಉತ್ತೇಜನ – ಕೇಂದ್ರದಿಂದ ೨೫ ಕೋಟಿ
ರಾಯಚೂರು.ಆ.೨೮- ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಅಭಿವೃದ್ಧಿಗೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ೨೫ ಕೋಟಿ ಅನುದಾನ ಕೃಷಿ ವಿಶ್ವವಿದ್ಯಾಲಯಕ್ಕೆ ಘೋಷಿಸಿದರೆ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯ ಘೋಷಣೆ ಮಾಡಿದರು.
ಅವರು ನಿನ್ನೆ ಮಧ್ಯಾಹ್ನ ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ಘೋಷಣೆಯನ್ನು ಮಾಡಿದರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಾತನಾಡುತ್ತಾ, ೨೦೨೩ ಸಿರಿಧಾನ್ಯ ವರ್ಷವನ್ನಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ ೦೧ ರಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಅಭಿವೃದ್ಧಿಗೆ ಸಂಬಂಧಿಸಿ ಬೃಹತ್ ಸಮಾವೇಶ ಮತ್ತು ವಿವಿಧ ಯೋಜನೆಗಳ ಬಗ್ಗೆ ಚಿಂತನ ಮಂತನ ನಡೆಯಲಿದೆ.
ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಮಹಾತ್ವಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚಿನ ಸಿರಿಧಾನ್ಯ ಬೆಳೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಿರಿಧಾನ್ಯ ಬೆಳೆ ಮತ್ತು ಸಂಸ್ಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಈ ಬಗ್ಗೆ ವಿಶೇಷ ಸಂಶೋಧನೆ ನಡೆಸಲು ಅನುಕೂಲವಾಗಲೆಂದು ನಬಾರ್ಡ್‌ನ ಗ್ರಾಮೀಣ ಮೂಲಭೂತ ಸೌಕರ್ಯ ಅನುದಾನದಡಿ ಉಳಿದ ೨೫ ಕೋಟಿ ರೂ.ಗಳನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ನೀಡುವುದಾಗಿ ಘೋಷಿಸಿದರು. ಸಿರಿಧಾನ್ಯ ನಮ್ಮ ಪಾರಂಪರಿಕ ಆಹಾರ ಪದಾರ್ಥವಾಗಿದೆ. ಆದರೆ, ಬದಲಾದ ವ್ಯವಸ್ಥೆಯಲ್ಲಿ ಮತ್ತು ಆಹಾರ ಭದ್ರತೆ ಹಿನ್ನೆಲೆಯಲ್ಲಿ ಸಿರಿಧಾನ್ಯ ಬದಲು ಅಕ್ಕಿ, ಗೋಧಿ, ವ್ಯಾಪಕವಾಗಿ ಬೆಳೆಯಲಾಗುತ್ತಿದೆಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತಾ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಏಳು ಸಿರಿಧಾನ್ಯಗಳ ಸಂಸ್ಕರಣ ಮತ್ತು ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತದೆ. ಸಿರಿಧಾನ್ಯದಲ್ಲಿ ಏಳು ಬಗೆಗಳಿದ್ದು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಂದೊಂದು ಸಿರಿಧಾನ್ಯ ಉತ್ಪಾದನೆ ಮತ್ತು ಸಂಸ್ಕರಣಕ್ಕೆ ವಿಶೇಷ ಅನುದಾನ ಒದಗಿಸಲಾಗುತ್ತದೆ. ಸಿರಿಧಾನ್ಯ ಬಗ್ಗೆ ಇಲ್ಲಿ ನಡೆಯುತ್ತಿರುವ ಈ ರಾಷ್ಟ್ರೀಯ ಸಮಾವೇಶದ ಚರ್ಚೆ ಮತ್ತು ಸಲಹಾ ಸೂಚನೆಗಳ ರಾಯಚೂರು ಸಿರಿಧಾನ್ಯ ಘೋಷಣೆ ಕಿರುಹೊತ್ತಿಗೆ ಹೊರ ತರುವಂತೆ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಹತ್ತಿ ವ್ಯಾಪಾಕವಾಗಿ ಬೆಳೆಯಲಾಗುತ್ತದೆ. ಗುಲ್ಬರ್ಗಾದಲ್ಲಿ ಕೇಂದ್ರ ಸರ್ಕಾರದಿಂದ ಜವಳಿ ಪಾರ್ಕ್ ನಿರ್ಮಿಸಲಾಗುತ್ತಿದೆ. ರಾಜ್ಯದಿಂದ ಸ್ಥಾಪಿಸಲು ಉದ್ದೇಶಿಸಿರುವ ಜವಳಿ ಪಾರ್ಕ್‌ನ್ನು ರಾಯಚೂರಿನಲ್ಲಿ ಸ್ಥಾಪಿಸುವುದಾಗಿ ಈ ಸಂದರ್ಭದಲ್ಲಿ ಅವರು ಘೋಷಿಸಿದರು.