ಜಿಲ್ಲೆಯಲ್ಲಿ ಪ್ರವಾಹ ಆತಂಕ ಸದ್ಯಕ್ಕಿಲ್ಲ: ಜಿಲ್ಲಾಧಿಕಾರಿ ಯಶವಂತ ಗುರುಕರ್

ಕಲಬುರಗಿ:ಸೆ.11: ಮಹಾರಾಷ್ಟ್ರ ಜಲಾಶಯಗಳಿಂದ ಬರುವ ನೀರಿನ ಮಟ್ಟ ತಗ್ಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರವಾಹವುಂಟಾಗುವ ಆತಂಕ ಸದ್ಯಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಉಜನಿ, ವೀರ್ ಭಟ್ಕರ್ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಿನ್ನಲೆ ಜಲಾಶಯಗಳಿಂದ ಭೀಮಾ ನದಿಗೆ 60 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗಿತ್ತು.
ಈ ಹಿನ್ನಲೆ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್​ದಿಂದ 1.20 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಸಹಜವಾಗಿ ನದಿ ತೀರದ ಗ್ರಾಮಗಳ ಹತ್ತಿರ ನೀರಿನ ಮಟ್ಟ ಹೆಚ್ಚಾಗಿದೆ. ಆದರೆ, 2 ಲಕ್ಷ ಕ್ಯೂಸೆಕಕ್ಕೂ ಅಧಿಕ ನೀರು ಹೊರಬಿಟ್ಟಾಗ ಮಾತ್ರ ಪ್ರವಾಹವುಂಟಾಗುತ್ತದೆ ಎಂದು ಹೇಳಿದರು.
ಸದ್ಯಕ್ಕೆ ಅಷ್ಟೊಂದು ಪ್ರಮಾಣದ ನೀರು ಬಿಡುತ್ತಿಲ್ಲ. ಅಲ್ಲದೇ, ನಿರಂತರವಾಗಿ ಉಜನಿ ಜಲಾಶಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿಯೂ ನೀರಿನ ಮಟ್ಟ ತಗ್ಗಿದ ಕಾರಣ 60ರಿಂದ 30 ಸಾವಿರ ಕ್ಯೂಸೆಕ್ ನೀರು ಮಾತ್ರ ನದಿಗೆ ಹರಿಸುತ್ತಿದ್ದಾರೆ. ಹೆಚ್ಚಿನ ನೀರು ಬರುವ ಆತಂಕ ಸದ್ಯಕ್ಕಿಲ್ಲ. ಹೀಗಾಗಿ ಸೊನ್ನ ಬ್ಯಾರೇಜ್‌ದಿಂದ ಹೊರ ಹರಿವು ಕಡಿಮೆ ಆಗಲಿದೆ ಎಂದು ಮಾಹಿತಿ ನೀಡಿದರು.
ಸೇತುವೆ ದಾಟುವ ಪ್ರಯತ್ನ ಮಾಡಬಾರದು: ನಾಳೆ ಮಧ್ಯಾಹ್ನದವರೆಗೆ ನೀರಿನ ಮಟ್ಟ ಬಹುತೇಕ ತಗ್ಗಲಿದ್ದು, ಘತ್ತರಗಿ ಗಾಣಗಾಪೂರ ಸೇತುವೆ ಸೇರಿ ಎಲ್ಲ ಸೇತುವೆ ಮೇಲೆ ಹರಿಯುವ ನೀರು ಇಳಿಕೆಯಾಗಲಿದೆ.
ನಾಳೆವರೆಗೆ ಸೇತುವೆ ದಾಟುವ ಪ್ರಯತ್ನ ಸಾರ್ವಜನಿಕರು ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.ನದಿ ತಟದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ತಾವಾಗಲಿ, ತಮ್ಮ ಜಾನುವಾರುಗಳನ್ನಾಗಲಿ ನದಿ ಕಡೆಗೆ ತೆಗೆದುಕೊಂಡು ಹೋಗಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಿಯ ಕಂದಾಯ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಸೇತುವೆಗಳ ಬಳಿ ಪೊಲೀಸರ ನಿಯೋಜನೆಯನ್ನೂ ಮಾಡಲಾಗಿದೆ ಎಂದು ವಿವರಿಸಿದರು.