ಜಿಲ್ಲೆಯಲ್ಲಿ ಪ್ರತಿದಿನ 3000 ಕೋವಿಡ್ ಪರೀಕ್ಷೆ ನಡೆಸಲು ಗುರಿ

ಬೀದರ.ಮಾ.19: ಬೀದರ ಜಿಲ್ಲೆಯಲ್ಲಿ ಪ್ರತಿದಿನ ರ್ಯಾಟ್ ಮತ್ತು ಆರ್ಟಿಪಿಸಿಆರ್ ಪರೀಕ್ಷೆಗಳು ಸೇರಿ ಒಟ್ಟು 3000 ರಷ್ಟು ಕೋವಿಡ್-19 ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿ ಕುಮಾರ್ ಅವರು ಗುರಿ ನಿಗದಿಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾರ್ಚ 18ರಂದು ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿಗಳು, ಬೀದರನಲ್ಲಿ ದಿನೇದಿನೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಪರಿಸ್ಥಿತಿಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸಿ, ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅವರನ್ನು ಜಾಗೃತಗೊಳಿಸಬೇಕು ಎಂದರು.
ನಿಯಮಪಾಲನೆ ಮಾಡದೇ ಇರುವವರಿಗೆ ದಂಡವಿದಿಸುವುದನ್ನು ಕಟ್ಟುನಿಟ್ಟುಗೊಳಿಸಿ ಜನರು ಮಾಸ್ಕ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಸಭೆ, ಸಮಾರಂಭ ಹಾಗೂ ಮದುವೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಡಿಮೆ ಪ್ರಮಾಣದಲ್ಲಿ ಜನರು ಸೇರುವಂತೆ ಕ್ರಮಗಳನ್ನು ಬಿಗಿಗೊಳಿಸಬೇಕು ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಜೊತೆಗೆ ಕೋವಿಶಿಲ್ಟ್ ಲಸಿಕೆ ನೀಡುವುದಕ್ಕು ಕೂಡ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಶಿಲ್ಡ್ ಲಸಿಕೆಯನ್ನು ನೀಡುವಲ್ಲಿ ಶೇ.96ರಷ್ಟು ಪ್ರಗತಿ, ಫ್ರಂಟ್ ಲೈನ್ ವರ್ಕರ್ಸಗೆ ಶೇ.84ರಷ್ಟು ಮತ್ತು 60 ವರ್ಷ ಮೇಲ್ಟಟ್ಟವರಿಗೆ ಲಸಿಕೆ ನೀಡುವಲ್ಲಿ ಶೇ.10ರಷ್ಟು ಪ್ರಗತಿಯಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸರ್ಕಾರವು ಬೀದರ ಜಿಲ್ಲೆಗೆ ಗುರಿನಿಗದಿಪಡಿಸಿದನುಸಾರ ಲಸಿಕೆ ನೀಡುವಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿಡಿಯೋ ಸಂವಾದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕರಾದ ಡಾ.ಶಿವಕುಮಾರ, ಡಿಎಸ್‍ಓ ಡಾ.ಕೃಷ್ಣಾ ರೆಡ್ಡಿ ಹಾಗೂ ಇನ್ನೀತರರು ಇದ್ದರು.