ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಚಿವ ಆನಂದ್‍ಸಿಂಗ್


ಸಂಜೆವಾಣಿ ವಾರ್ತೆ
ಹೊಸಪೇಟೆ ಜ1: ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ,  ಕುಡಿಯುವ ನೀರಿನ ಹಾಗೂ ಎಲ್ಲಾ ಹಂತದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್‍ಸಿಂಗ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಆಶ್ರಯ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು.
ವಸತಿ:
ಜಂಭುನಾಥಹಳ್ಳಿ ಹತ್ತಿರ ಇರುವ 7ಎಕರೆ ಪ್ರದೇಶದಲ್ಲಿ ನಿವೇಶನ ವಿಂಗಡಿಸಿ ನಗರದ ಎಲ್ಲಾ  ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಹೊಸಪೇಟೆ ನಗರ ವ್ಯಾಪ್ತಿಯಲ್ಲಿ 30.23 ಎಕರೆ ಖಾಲಿ ಜಾಗವನ್ನು ಗುರುತಿಸಲಾಗಿದ್ದು, ವಸತಿ ರಹಿತರಿಗೆ ನಿವೇಶವನ್ನು ಕಲ್ಪಿಸಲು ಸರ್ಕಾರಕ್ಕೆ ರೂ.150 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ಹೊಸಪೇಟೆ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ವಿವಿಧೆಡೆ 39 ಎಕರೆ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ. ಅಲ್ಲಿ ನಿವೇಶನ ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಆದರೂ ಸಹ ಅನೇಕ ನಿವೇಶನ ರಹಿತರಿದ್ದು, ಅವರಿಗೆ ಮನೆಗಳನ್ನು ಕಟ್ಟಿಸಿಕೊಡಲು 97 ಎಕರೆ ಜಮೀನಿನ ಅವಶ್ಯಕತೆ ಇದೆ. ಈ ಜಮೀನನ್ನು ಗುರುತಿಸಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ, ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ, ನಗರಾಭಿವೃದ್ಧಿ ಪ್ರಾಧಿಕಾರಿದ ಆಯುಕ್ತ ಈರಣ್ಣ, ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು