ಜಿಲ್ಲೆಯಲ್ಲಿ ಜ.27 ರಿಂದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ:ಸಕಲ ಸಿದ್ಧತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ

ವಿಜಯಪುರ, ಜ.17: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ಕಳೆದ ನ.2 ಕ್ಕೆ 50 ವರ್ಷ ಪೂರ್ಣಗೊಂಡಿರುವ ಶುಭ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ-50 ರ “ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ಜ. 27 ರಿಂದ ಫೆ.12 ರವರೆಗೆ ಜಿಲ್ಲೆಯಾದ್ಯಂತ ” ಜ್ಯೋತಿ ಹೊತ್ತ ರಥ ಯಾತ್ರೆ” ನಡೆಯಲಿದ್ದು, ಸಂಭ್ರಮದ ಸ್ವಾಗತಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೆಸ್ವಾನ ಸಭಾಂಗಣದಲ್ಲಿ ಮಂಗಳವಾರ
ವಿಡಿಯೋ ಕಾನ್ಫರೆನ್ಸ್ ಮೂಲಕ ಜ್ಯೋತಿ ರಥಯಾತ್ರೆಗೆ ಸ್ವಾಗತ ಮತ್ತು ಸಂಚಾರಕ್ಕಾಗಿ ಕೈಗೊಳ್ಳಬೇಕಾದ ಸಿದ್ಧತೆ ಗಳ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಪ್ರವೇಶಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿವಿಧ ಸ್ಥಳಗಳ ಮೂಲಕ ಕನ್ನಡ ನಾಡು ನುಡಿಯ, ಸಾಂಸ್ಕøತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ಸಾರಿ ಹೇಳುವ ವಿಶೇಷ ಜ್ಯೋತಿ ರಥಯಾತ್ರೆ ಇದಾಗಿದ್ದು, ಆಯಾ ತಾಲ್ಲೂಕು ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಸಮನ್ವಯತೆದೊಂದಿಗೆ ಈ ಜ್ಯೋತಿ ಯಾತ್ರೆಗೆ ಅದ್ಧೂರಿ ಸ್ವಾಗತ ನಡೆಯಬೇಕು. ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಜ್ಯೋತಿ ಯಾತ್ರೆ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳ ಮತ್ತು ಯಾತ್ರೆಗೆ ಸಂಬಂಧಿಸಿದ ತಾಲ್ಲೂಕುವಾರು ರೂಟ್ ಮ್ಯಾಪ್ ಸಿದ್ಧಪಡಿಸಿ, ವಿವಿಧ ಸ್ಥಳಗಳ ಮೂಲಕ ಜ್ಯೋತಿಯಾತ್ರೆ ಹೋಗುವ ಪಟ್ಟಿಯನ್ನು ಸಿದ್ಧಪಡಿಸಿ ಸಭೆ ನಡೆಸಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಜ್ಯೋತಿಯಾತ್ರೆ ಸಂದರ್ಭದಲ್ಲಿ ಸಂಭ್ರಮದ ಸ್ವಾಗತ, ವಿವಿಧ ಸಾಂಸ್ಕೃತಿಕ, ಐತಿಹಾಸಿಕ, ಸ್ಥಳೀಯ ಕಲೆಗಳ ಪೆÇ್ರೀತ್ಸಾಹ ಒಳಗೊಂಡ ಕಾರ್ಯಕ್ರಮಗಳ ಮೂಲಕ ಯಾತ್ರೆ ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ರಥಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರನ್ನು ಆಹ್ವಾನಿಸಬೇಕು. ಸಾರ್ವಜನಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಅಧಿಕಾರಿ, ಸಿಬ್ಬಂದಿಗಳು, ಕಲಾವಿದರು, ಕನ್ನಡಪರ ಸಂಘಟನೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಲು ಸಮನ್ವಯತೆಯಿಂದ ಯೋಜನಾ ಬದ್ಧವಾದ ಜ್ಯೋತಿಯಾತ್ರೆಯ ರೂಪುರೇಷೆ ಯೋಜನೆಯನ್ನು ಸಿದ್ಧಪಡಿಸಬೇಕು ಎಂದರು.
ಕನ್ನಡ ಜ್ಯೋತಿಯನ್ನು ಹೊತ್ತ ರಥಯಾತ್ರೆಯು ಇತಿಹಾಸ, ಕಲೆ, ಸಾಹಿತ್ಯ , ಸಂಸ್ಕೃತಿ, ನಾಡು ನುಡಿಗೆ ಸಂಬಂಧಿಸಿದ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಕರ್ನಾಟಕ ಸಂಭ್ರಮ -50ರ ಈ ಮಹತ್ವದ ಕನ್ನಡ ಜ್ಯೋತಿ ಯಾತ್ರೆ ಬಸವ ಕಲ್ಯಾಣದಿಂದ ಆಗಮಿಸಲಿದ್ದು, ಜ.27ರಂದು ಆಲಮೇಲ ತಾಲ್ಲೂಕಿನ ಗಡಿಯಲ್ಲಿ ಸ್ವಾಗತಿಸಿ, ಪಟ್ಟಣ ಹಾಗೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಯಶಸ್ವಿಗೊಳಿಸಬೇಕು.
ಅದರಂತೆ, ವಿವಿಧ ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳ ಹಾಗೂ ತಾಲ್ಲೂಕಿನ ಗಡಿಭಾಗದ ವರೆಗಿನ ಮಾರ್ಗಗಳ ಮಧ್ಯದಲ್ಲಿ ಗೌರವಯುತವಾಗಿ ಈ ಜ್ಯೋತಿ ಯಾತ್ರೆಗೆ ಬರಮಾಡಿಕೊಳ್ಳುವ ಮತ್ತು ಬೀಳ್ಕೊಡುವ ವ್ಯವಸ್ಥೆ ಮಾಡಬೇಕು. ಸೂಕ್ತ ಪೆÇಲೀಸ್ ಬಂದೋಬಸ್ತ್ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲಿ ಜ್ಯೋತಿಯಾತ್ರೆ ಸಂಚರಿಸುವ ಮಾರ್ಗ ಪಟ್ಟಣ ಹಳ್ಳಿಗಳಲ್ಲಿ ಸ್ವಾಗತ, ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಕ್ರಮ ಕೈಗೊಳ್ಳಬೇಕು. ಶಿಷ್ಟಾಚಾರದಂತೆ ಭವ್ಯ ಸ್ವಾಗತಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ತಾಲೂಕಿನ ತಹಶೀಲ್ದಾರ,ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.