ಚಾಮರಾಜನಗರ, ಏ.10:- ಜಿಲ್ಲೆಯಲ್ಲಿ ಜ್ಯೋತಿಪಣ ಗಾಣಿಗರ ಸಂಘವನ್ನು ಸಧೃಢವಾಗಿ ಸಂಘಟನೆ ಮಾಡುವ ಮೂಲಕ ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಎಲ್ಲರು ಶ್ರಮಿಸೋಣ ಎಂದು ಜಿಲ್ಲಾ ಜ್ಯೋತಿ ಪಣ ಗಾಣಿಗರ ಸಂಘ ಅಧ್ಯಕ್ಷ ಜಿ. ಅಂಕಶೆಟ್ಟಿ ತಿಳಿಸಿದರು.
ನಗರದ ಹೊರ ವಲದಯಲ್ಲಿರುವ ಮಾಯಾ ಗಾರ್ಡನ್‍ನಲ್ಲಿ ಜಿಲ್ಲಾ ಜ್ಯೋತಿಪಣ ಗಾಣಿಗರ ಸಂಘದ ಪದಾಧಿಕರಿಗಳ ಸಭೆ ಹಾಗೂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗಾಣಿಗ ಸಮುದಾಯವರು ಕಡಿಮೆ ಸಂಖ್ಯೆಯಲ್ಲಿದ್ದು, ವೃತ್ತಿ ಹಿನ್ನೆಲೆಯಲ್ಲಿ ಅಲ್ಲಲ್ಲಿ ಚದುರಿ ಹೋಗಿದ್ದಾರೆ. ಗಾಣಿಗ ಸಮಾಜದ ಇತರೇ ಜಾತಿಗಳು ಸೇರ್ಪಡೆಯಾಗುತ್ತಿರುವ ಕಾರಣದಿಂದ ಮೂಲ ಗಾಣಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ.
ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜ್ಯೋತಿಪಣ ಗಾಣಿಗ ಸಂಘಟನೆಯನ್ನು ರಚನೆ ಮಾಡಲಾಗುತ್ತಿದೆ. ಈಗಾಗಲೇ ಗಾಣಿಗ ಸಮುದಾಯ 2ಎ ನಲ್ಲಿದ್ದು, ಸರ್ಕಾರ ಮೀಸಲಾತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲರು ಪ್ರಯತ್ನ ಮಾಡಬೇಕಾಗಿದೆ ಎಂದರು.
ಜ್ಯೋತಿಪಣ ಗಾಣಿಗರ ಸಂಘಟನೆಯನ್ನು ಬಲಿಷ್ಠಗೊಳಿಸುವ ಜೊತೆಗೆ ಸಮಾಜದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕಾಗಿದೆ. ಬಡತನದ ಕಾರಣದಿಂದಾಗಿ ಅನೇಕ ಕುಟುಂಬಗಳÀಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂಥ ಕುಟುಂಬಗಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿ ತರುವ ಪ್ರಯತ್ನ ಎಲ್ಲರಿಂದಾಗಬೇಕಾಗಿದೆ ಎಂದು ಅಂಕಶೆಟ್ಟಿ ತಿಳಿಸಿದರು.
ಸಂಘದ ಕಾರ್ಯಾಧ್ಯಕ್ಷ ಗುಂಡ್ಲುಪೇಟೆ ಜೆ. ಶಿವಕುಮಾರ್ ಮಾತನಾಡಿ, ಸಮುದಾಯದಲ್ಲಿ ಬಡವರ ಸಂಖ್ಯೆ ಹೆಚ್ಚಿದೆ. ಈ ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳು ರೂಪುಕೊಳ್ಳಬೇಕು. ಹಳ್ಳಿಗಳಲ್ಲಿ ಯುವಕರ ಸಂಘಗಳನ್ನು ಸ್ಥಾಪನೆ ಮಾಡಿ, ಆ ಮೂಲಕ ಶೈಕ್ಷಣಿಕ ಆರ್ಥಿಕ ಹಾಗು ಸಾಮಾಜಿಕ ಪ್ರಗತಿಯನ್ನು ಹೊಂದಲು ಜಾಗೃತಿ ಮೂಡಿಸೋಣ ಎಂದರು.
ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಗಮಿಸಿದ್ದ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿ ಸನ್ಮಾನಿಸುವ ಜೊತೆಗೆ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಸಂಘ ಬಲಿಷ್ಠಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಯೋತಿಪಣ ಗಾಣಿಗ ಸಂಘದ ಗೌರವ ಅಧ್ಯಕ್ಷ ಮಹದೇವಪ್ಪ ಕೊಳ್ಳೇಗಾಲ, ಪ್ರಧಾನ ಕಾರ್ಯದರ್ಶಿ ಜಯರಾಮಶೆಟ್ಟಿ, ಉಪಾಧ್ಯಕ್ಷರಾದ ಎಸ್‍ಎಂಟಿ ಸಿದ್ದರಾಜು, ರಂಗಸ್ವಾಮಿ ಕೂಡ್ಲೂರು, ಎಚ್.ಎಸ್. ನಂಜಪ್ಪ ಹಂಗಳ, ವೆಂಕಟಚಲ ಯಳಂದೂರು, ಖಜಾಂಚಿ ಮಹದೇವ್ ಸೋಮವಾರಪೇಟೆ, ಸಹ ಕಾರ್ಯದರ್ಶಿಗಳಾದ ಮಧು ಕೂಡ್ಲುರು, ಮಹದೇವಸ್ವಾಮಿ, ಸಾಂಸ್ಕøತಿಕ ಕಾರ್ಯದರ್ಶಿ ಮಲ್ಲಶೆಟ್ಟಿ, ಸಂಘದ ನಿರ್ದೇಶಕರಾದ ಎಂ. ದುಂಡಯ್ಯ, ರಂಗಸ್ವಾಮಿ, ಸಿದ್ದರಾಜು, ಮಾದಶೆಟ್ಟಿ, ಕೆ. ನಾಗರಾಜು, ರಂಗಸ್ವಾಮಿ, ಮಲ್ಲೇಶ್ ಎಂ. ರಾಚಶೆಟ್ಟಿ, ಚಿಕ್ಕಶೆಟ್ಟಿ, ರಾಜೇಶ್ ಎಂ. ರಂಗಸ್ವಾಮಿ, ದೀಪಕ್, ಶ್ರೀನಿವಾಸ, ನಾಗರಾಜು, ಮಾದಶೆಟ್ಟಿ ರವರುಗಳಿಗೆ ನೇಮಕಾತಿ ಪತ್ರ ನೀಡಲಾಯಿತು.