ಜಿಲ್ಲೆಯಲ್ಲಿ ಜೆಡಿಎಸ್ ಪರ್ವ ಆರಂಭ: ಮಂಜುನಾಥ

ಚಾಮರಾಜನಗರ, ಮಾ.06:- ಜಿಲ್ಲೆಯಲ್ಲಿ ಜೆಡಿಎಸ್ ಪರ್ವ ಆರಂಭವಾಗಿದ್ದು, ಜಿಲ್ಲೆಯು ಜೆಡಿಎಸ್ ಭದ್ರಕೋಟೆಯಾಗುವ ಜೊತೆಗೆ ಕುಮಾರಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ತಿಳಿಸಿದರು.
ತಾಲೂಕಿನ ಸಂತೇಮಹರಳ್ಳಿಯ ಕುದೇರು ರಸ್ತೆಯಲ್ಲಿ ಭಾನುವಾರ ನಡೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚ ರತ್ನ ಯೋಜನೆಗಳನ್ನು ಜಾರಿ ಮಾಡಲು ಹಾಗೂ ರೈತರ ಸಾಲ ಮನ್ನಾ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣವಾಗಿ ಮಾಡುವ ಉದ್ದೇಶವನ್ನು ನಮ್ಮ ಪಕ್ಷ ಹೊಂದಿದೆ. ಕುಮಾರಣ್ಣ ಮುಂದಿನ ಮುಖ್ಯಮಂತ್ರಿಯಾಗಲು ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಬೆಂಬಲ ದೊರೆಯಬೇಕು. ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕುಮಾರಣ್ಣ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
25 ಸಾವಿರ ಕೋಟಿ ರೈತರ ಸಾಲಮನ್ನಾ, 75 ಕ್ಷೇತ್ರಗಳ ಪ್ರವಾಸ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ಯವಾಗಿದೆ. ಯುವÀಕರ, ಮಹಿಳಾ ಸಬಲೀಕರಣವಾಗಬೇಕಾಗಿದೆ. ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಉದ್ದಾರವಾಗುವುದಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬೆಂಬಲಿಸಬೇಕು ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಾಗಳಿ ರೇವಣ್ಣ ಮಾತನಾಡಿ, ಕೇವಲ 15 ದಿನಗಳ ಅವಧಿಯಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದ ಮಂಜುನಾಥ್ ಅವರು ಕಳೆದ ಚುನಾವಣೆಯಲ್ಲಿ 45 ಸಾವಿರ ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಶಕ್ತಿಯನ್ನು ವೃದ್ದಿಸುತ್ತಿದ್ದರು. ಸೋತರು ಸಹ ಧೃತಿಗೇಡದೇ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯ ಜನರು ಕಾಂಗ್ರೆಸ್ ಬಿಜೆಪಿ ಆಡಳಿತವನ್ನು ನೋಡಿ ಬೇಸತ್ತಿದ್ದು, ಪ್ರಾಧೇಶಿಕ ಪಕ್ಷವಾದ ಜೆಡಿಎಸ್‍ನಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂಬುದನ್ನು ಮನಗಂಡ ಮತದಾರರು 2023ರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಎಸ್ಪಿಯಿಂದ ಗೆದ್ದ ಶಾಸಕ ಎನ್. ಮಹೇಶ್, ಕ್ಷೇತ್ರದ ಜನರಿಗೆ ಅಪಮಾನ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕುಮಾರಣ್ಣ ಸರ್ಕಾರ ಪತನಕ್ಕೆ ಕಾರಣ ಮಹೇಶ್ ಅವರನ್ನು ಈ ಬಾರಿ ಸೋಲಿಸಿ ನಮ್ಮ ಪಕ್ಷದ ಸಂಭಾವ್ಯ ಅಭ್ಯರ್ಥಿ ಓಲೆ ಮಹಾದೇವು ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕೊಳ್ಳೇಗಾಲ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಓಲೆ ಮಹಾದೇವು ಮಾತನಾಡಿ, ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ರಾಜಕೀಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದೇನೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನನ್ನಗೊಂದು ಅವಕಾಶ ಮಾಡಿಕೊಟ್ಟು ತಮ್ಮ ಸೇವೆ ಮಾಡುವ ಭಾಗ್ಯವನ್ನು ಕರುಣಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ರಾಜು, ಮುಖಂಡರಾದ ಶಿವಮಲ್ಲು, ಶಿವಮೂರ್ತಿ, ತಾಲೂಕು ಅಧ್ಯಕ್ಷ ಸೈಯದ್ ಅಕ್ರಮ್, ಮಹಿಳಾ ಘಟಕದ ಅಧ್ಯಕ್ಷೆ ದೊಡ್ಡರಾಯಪೇಟೆ ಉಷಾ, ಪುಟ್ಟಸ್ವಾಮಿ, ಸಿದ್ದಯ್ಯ ಮೊದಲಾದವರು ಇದ್ದರು.