ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸರಿಯಾಗಿರಲಿ: ಸಚಿವ ಡಾ.ಕೆ.ಸುಧಾಕರ

ಬೀದರ:ಮೇ.1: ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಕೊವಿಡ್ ಸಾವುಗಳು ಬೀದರನಲ್ಲಿ ಸಂಭವಿಸಿದೆ. ಹೀಗಾಗಿ ಬೀದರನಲ್ಲಿ ಕೋವಿಡ್ ನಿರ್ಹಹಣೆಯು ಇನ್ನು ಸಮರ್ಪಕವಾಗಿ ನಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗು ಇನ್ನೀತರ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಬೀದರನ ಬ್ರಿಮ್ಸನಲ್ಲಿ ಮ್ಯಾನ್ ಪಾವರ್ ಸಾಕಷ್ಟಿದೆ. ವೈದ್ಯರು ಮತ್ತು ಸಿಬ್ಬಂದಿ ಸೇರಿ 800 ಜನರಿದ್ದಾರೆ. ನಾಲ್ಕು ತಾಲೂಕುಗಳಲ್ಲಿ ತಲಾ ಎಂಟು ಜನರು ವಿಶೇಷ ತಜ್ಯ ವೈದ್ಯರಿದ್ದಾರೆ. ಇಷ್ಟೆಲ್ಲಾ ಅಗತ್ಯ ವೈದ್ಯಕೀಯ ಸಿಬ್ಬಂದಿ ಇದ್ದಾಗ್ಯು ಜನರಿಂದ ವೈದ್ಯರಿಲ್ಲ, ಚಿಕಿತ್ಸೆ ಸಿಗುತ್ತಿಲ್ಲ, ಇಂಜೆಕ್ಷನ್ ಕೊಡುತ್ತಿಲ್ಲ ಎಂದು ದೂರುಗಳು ಬರುವುದು ಸರಿಯಲ್ಲ. ಇಷ್ಟೆಲ್ಲಾ ಲಭ್ಯವಿರುವ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಸರಿಯಾಗಿ ಕೆಲಸಕ್ಕೆ ಹಚ್ಚಿದಲ್ಲಿ ಈಗ ಎದುರಾದ ಸವಾಲನ್ನು ಸರಿಪಡಿಸಬಹುದು ಎಂದು ಸಚಿವರು ಸಲಹೆ ಮಾಡಿದರು. ಪಕ್ಷಾತೀತವಾಗಿ ಎಲ್ಲರೂ ಸೇರಿ ಕೆಲಸ ಮಾಡುವುದು ಈಗ ಅತೀ ಅವಶ್ಯವಿದೆ ಎಂದರು.
ಇಂಜೆಕ್ಷನ್ ಸೇರಿದಂತೆ ಇನ್ನೀತರ ವೈದ್ಯಕೀಯ ಸೌಕರ್ಯವು ಈಗ ಅತೀ ಅವಶ್ಯಕತೆ ಇರುವಾಗ, ಅನಧೀಕೃತವಾಗಿ ಯಾವುದಾದರು ಖಾಸಗಿ ಆಸ್ಪತ್ರೆಯು ಮಹತ್ವದ ಔಷಧಿ ಸಂಗ್ರಹಿಸಿಟ್ಟುಕೊಂಡಿರುವುದು ಕಂಡು ಬಂದಲ್ಲಿ, ಯಾರೇ ಇರಲಿ ಅಂತವರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ ಕ್ರಮ ವಹಿಸಬೇಕು ಎಂದು ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರಿಗೆ ತಿಳಿಸಿದರು.
ಕೋವಿಡ್ ಪಾಜಿಟೀವ್ ಬರುವವರಿಗೆ ಮೊದಲು ನೈತಿಕ ಸ್ಥೈರ್ಯ ತುಂಬಬೇಕು. ಜೊತೆಗೆ ಅವರಿಗೆ ಹೆಲ್ತ್ ಕಿಟ್ ಕೊಡಬೇಕು. ಆರೋಗ್ಯ ಇಲಾಖೆಯ ಕಿಟ್ ಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಹೋಮ್ ಐಸೊಲೇಶನ್‍ನಲ್ಲಿ ಇದ್ದರು ಕೂಡ ಕೋವಿಡ್ ನಿಂದ ಗುಣಮುರಾಗಬಹುದು ಎನ್ನುವ ಸಂದೇಶವು ಸ್ಥಳೀಯ ಮೀಡಿಯಾ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಸಂದೇಶವು ವ್ಯಾಪಕ ಹೋಗುವಂತಾಗಿ ಕೋವಿಡ್ ಬಾಧಿತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ತಿಳಿಸಿದರು.
ಮಾಸ್ಕ ಕಲ್ಚರ್ ಬೆಳೆಸಿ: ಎಷ್ಟೋ ಜನರಿಗೆ ಹೇಗೆ ಮಾಸ್ಕ ಬಳಸಬೇಕು ಎಂಬುದು ಕೂಡ ಗೊತ್ತಿಲ್ಲ. ತಾವು ನಿಯಮಗಳನ್ನು ಬಿಗಿಗೊಳಿಸಿ ದಂಡವಿದಿಸಿ ಜನರಲ್ಲಿ ಶಿಸ್ತುಬದ್ಧ ಮಾಸ್ಕ ಕಲ್ಚರ್ ಬೆಳೆಯುವಂತೆ ಮಾಡಲು ಕ್ರಮವಹಿಸಿ ಎಂದು ಸಚಿವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ತಾಲೂಕಾಸ್ಪತ್ರೆಯಲ್ಲೂ ಚಿಕಿತ್ಸೆ ಸಿಗಲಿ: ತಾಲೂಕು ಆಸ್ಪತ್ರೆಗಳಲ್ಲಿ ತಲಾ 50 ಆಕ್ಸಿಜೇಶನ್ ಬೆಡ್ ಗಳು ಇರಬೇಕು. ಕನಿಷ್ಠ ಚಿಕಿತ್ಸೆಯು ತಾಲೂಕು ಆಸ್ಪತ್ರೆಗಳಲ್ಲಿಯೇ ಸಿಗುವಂತಾದಲ್ಲಿ ಜಿಲ್ಲಾಸ್ಪತ್ರೆಗೆ ಆಗುವ ಹೊರೆ ತಪ್ಪಲಿದೆ ಎಂದು ತಿಳಿಸಿದರು.
ಬ್ರಿಮ್ಸ ಸುಧಾರಿಸಿ: ಬ್ರಿಮ್ಸ ಅಂದರೆ ಸಾವು ಅನ್ನುವಂತಾಗಬಾರದು. ಕೂಡಲೇ ಕೆಎಎಸ್ ಇಲ್ಲವೇ ಅದಕ್ಕೆ ಸಮಾನ ಇರುವ ಹುದ್ದೆಗಳ ಅಧಿಕಾರಿಗಳಿಬ್ಬರನ್ನು ಹಾಕಿ ಬ್ರಿಮ್ಸನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಕೋವಿಡ್ ತಡೆಗೆ ಮೊದಲಾದ್ಯತೆ: ಪಶು ಸಂಗೋಪನೆ ಹಾಗು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮಾತನಾಡಿ, ಕೋವಿಡ್ ತೆಡೆಗೆ ಈಗ ಮೊದಲಾದ್ಯತೆ ನೀಡಲಾಗಿದೆ. ಸಂಸದರು, ಶಾಸಕರು ಮತ್ತು ಇನ್ನೀತರ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಸಲಹೆ ಮಾಡಲಾಗಿದೆ. ಈಗಾಗಲೆ ಎಲ್ಲಾ ತಾಲೂಕುಗಳಲ್ಲಿ ಸಭೆ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ಕೋವಿಡ್ ನಿರ್ವಹಣೆ ಒಬ್ಬರಿಂದ ಆಗುವುದಿಲ್ಲ. ಎಲ್ಲರೂ ಸೇರಿ ಮಾಡುವಂತಹ ಕೆಲಸ ಇದಾಗಿದೆ ಎಂದು ತಿಳಿಸಿದರು.
ಶಾಸಕರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ, ಕೋವಿಡ್ ಪಾಜಿಟೀವ್ ಬಂದು ಹೋಮ್ ಐಸೊಲೇಶನ್ ದಲ್ಲಿ ಇರುವವರಿಗೆ ಕಾಲಕಾಲಕ್ಕೆ ವೈದ್ಯರು ಮತ್ತು ಸಿಬ್ಬಂದಿ ಭೇಟಿ ನೀಡಿ, ಚಿಕಿತ್ಸೆ ಕೊಡುತ್ತಿಲ್ಲ. ಬ್ರಿಮ್ಸ ಮತ್ತು ಎಲ್ಲ ಆಸ್ಪತ್ರೆಗಳಲ್ಲಿ ಸಮರ್ಪಕವಾದ ವೈದ್ಯಕೀಯ ಮಾನವ ಸಂಪನ್ಮೂಲ ಇದೆ. ಎಲ್ಲರು ಒಗ್ಗೂಡಿ ಕೆಲಸ ಮಾಡಿದಲ್ಲಿ ಕೋವಿಡ್ ನಿರ್ವಹಣೆಯನ್ನು ಸರಾಗವಾಗಿ ಮಾಡಬಹುದಾಗಿದೆ ಎಂದರು.
ಶಾಸಕರಾದ ರಹೀಂ ಖಾನ್ ಅವರು ಮಾತನಾಡಿ, ಕೋವಿಡ್ ನಿಂದ ಇತ್ತೀಚೆಗೆ ಕೆಲವರು ತೀರಿಕೊಂಡರೂ ವೈದ್ಯರು ಬರಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ: ಶಾಸಕರಾದ ಈಶ್ಚರ ಖಂಡ್ರೆ, ರಾಜಶೇಖರ ಪಾಟೀಲ, ವಿಜಯಸಿಂಗ್, ಅರವಿಂದಕುಮಾರ ಅರಳಿ ಮತ್ತು ಚಂದ್ರಶೇಖರ ಪಾಟೀಲ ಅವರು ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಾಸಕರಾದ ಈಶ್ವರ ಖಂಡ್ರೆ ಅವರು, ಬ್ರಿಮ್ಸ ಆಡಳಿತ ಸುಧಾರಣೆಯಾಗಬೇಕು. ಅಲ್ಲಿ ಪೆÇಲೀಸ್ ವ್ಯವಸ್ಥೆ ಮಾಡಿಸಿ ಸರಿಪಡಿಸಬೇಕು. ಆಕ್ಸಿಜನ್ ಬೇಡ್ ಹೆಚ್ಚಿಸಬೇಕು. ಹೆಲ್ಪಲೈನ್ ಸರಿಯಾಗಿ ವರ್ಕ ಆಗಬೇಕು. ರೆಮ್ ಡಿಸಿವರ್ ಬೀದರ ಜಿಲ್ಲೆಗೆ ಸಮರ್ಪಕ ಪೂರೈಕೆಯಾಗಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಉಪ ಚುನಾವಣೆ ಮತ್ತು ನಗರಸಭೆ ಚುನಾವಣೆಯ ನಡುವೆಯೇ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ. ಬೀದರ ದೂರದ ಮತ್ತು ಗಡಿ ಜಿಲ್ಲೆಯಾಗಿರುವ ಕಾರಣಕ್ಕೆ ಕೂಡ ಸಂವಹನ ಮತ್ತು ತುರ್ತು ಸಂಪರ್ಕ ಸಾಧಿಸಲಾರದಂತಹ ತೊಂದರೆಗಳಿವೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯ ಪ್ರಮಾಣವನ್ನು ಕಡಿಮೆಗೊಳಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಇದಕ್ಕು ಮೊದಲು ಡಿಎಎಚ್‍ಓ ಡಾ.ವಿ.ಜಿ.ರೆಡ್ಡಿ ಅವರು ಪ್ರಾತ್ಯಕ್ಷಿಕೆ ಮೂಲಕ ಕೊವಿಡ್ ನ ಬೀದರ ಜಿಲ್ಲಾ ವಾಸ್ತವ ಸ್ಥಿತಿಗತಿ ತಿಳಿಸಿದರು. ಜಿಲ್ಲೆಯಲ್ಲಿ ಇದುವರೆಗೆ 4,15,174 ಜನರಿಗೆ ಕೋವಿಡ್ ಪರೀಕ್ಷಿಸಲಾಗಿ ಈ ಪೈಕಿ ಇದುವರೆಗೆ 17,134 ಜನರಿಗೆ ಕೋವಿಡ್ ಪಾಜಿಟೀವ್ ಬಂದಿದೆ. ಇದುವರೆಗೆ 246 ಜನರು ಕೋವಿಡ್ ನಿಂದ ನಿಧನರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಿರ್ಮಲಾ ಮಾನೇಗೋಪಾಳೆ, ನಿಗಮ ಮಂಡಳಿ ಅಧ್ಯಕ್ಷರಾದ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಜಿಪಂ ಸಿಇಓ ಜಗೀರಾ ನಸೀಮ, ಬ್ರಿಮ್ಸ ನಿರ್ದೇಶಕರಾದ ಡಾ.ಶಿವಕುಮಾರ ಸಿ.ಎಚ್. ಹಾಗು ಇತರರು ಇದ್ದರು.