ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರತ್ಯೇಕ ಐಎಎಸ್ ಶ್ರೇಣಿ ಅಧಿಕಾರಿ ನೇಮಕಕ್ಕೆ ಬಿ.ಆರ್. ಪಾಟೀಲ್ ಆಗ್ರಹ

ಕಲಬುರಗಿ.ಏ.20:ಜಿಲ್ಲೆ ಕೊರೋನಾದಿಂದ ಜರ್ಜರಿತವಾಗಿದೆ. ದಿನಕ್ಕೆ ನೂರಾರು ಹೊಸ ಪ್ರಕರಣಗಳು ಬೆಳಕಿಗೆ ಬಂದರೆ ಹಲವಾರು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಆಕ್ಷಿಜನ್ ಕೊರತೆಯಿಂದಾಗಿ ಹೊಸ ರೋಗಿಗಳಿಗೆ ಆಸ್ಪತ್ರೆಗಳ ಬೆಡ್ ಸಿಗದೇ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿಯನ್ನು ನಿಭಾಯಿಸಲು ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು ಎಂದು ಆಳಂದ್ ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊರೋನಾ ರೋಗ ತನ್ನ ಕದಂಬ ಬಾಹು ಚಾಚಿದ ಪರಿಣಾಮ ರಾಜ್ಯದಲ್ಲಿಯೇ ಅಷ್ಟೇಕೆ ದೇಶದಲ್ಲಿಯೇ ಜಿಲ್ಲೆಯಲ್ಲಿ ಮೊಟ್ಟ ಮೊದಲ ಕೋವಿಡ್‍ನಿಂದಾಗಿ ಸಾವು ಸಂಭವಿಸಿತು. ಆ ನಂತರವೂ ಕೂಡ ಕೊರೋನಾ ಸೋಂಕು ಜಿಲ್ಲೆಯ ಜನರನ್ನು ಸಾಕಷ್ಟು ಬಾಧಿಸಿತು. ಪರಿಣಾಮವಾಗಿ ನೂರಾರು ಸಾವುಗಳಾದವು. ಇದರಿಂದಾಗಿ ಜನಸಾಮಾನ್ಯರಿಗಂತೂ ಸಾಕಷ್ಟು ಆರ್ಥಿಕ, ಮಾನಸಿಕ ಹಾಗೂ ಶಾರೀರಿಕವಾಗಿ ದುರ್ಬಲಗೊಳ್ಳುವಂತಾಗಿತ್ತು. ಕಳೆದ ಬಾರಿಯೇ ಸಮರ್ಪಕ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ರಾಜ್ಯ ಸರ್ಕಾರವು ಈಗಲೂ ಸಹ ಸಂಪೂರ್ಣ ವಿಫಲವಾಗಿದೆ. ಇದನ್ನು ನೋಡಿದರೆ ಇದು ಖಾಲಿ ಡಬ್ಬಾ ಸರ್ಕಾರ ಎಂಧು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರಕ್ಕೆ ಚುನಾವಣೆಗಳೇ ಬಹಳ ಮುಖ್ಯವಾಗಿದೆ. ಜನರ ಆರೋಗ್ಯ ಮುಖ್ಯವಲ್ಲ ಎಂದು ಟೀಕಿಸಿದ ಅವರು, ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಆರು ಜನ ಸಚಿವರು ಬೀಡು ಬಿಟ್ಟರು. ಆದಾಗ್ಯೂ, ಕೋವಿಡ್ ನಿಯಂತ್ರಣಕ್ಕೆ ಆ ಯಾವುದೇ ಸಚಿವರು ಗಮನಹರಿಸಲಿಲ್ಲ ಎಂದು ಅವರು ದೂರಿದರು.
ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ಜಿಮ್ಸ್‍ನಲ್ಲಿ ಸೋಂಕಿತರಿಗಾಗಿ 175 ಬೆಡ್‍ಗಳನ್ನು ಹಾಗೂ ಇಎಸ್‍ಐಸಿಯಲ್ಲಿ 150 ಬೆಡ್‍ಗಳನ್ನು ಜೊತೆಗೆ 16 ಖಾಸಗಿ ಆಸ್ಪತ್ರೆಗಳ ಬೆಡ್‍ಗಳು ಸೇರಿದರೆ ಒಟ್ಟು 914 ಬೆಡ್‍ಗಳು ಲಭ್ಯವಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತಿವೆಯಾದರೂ ಪ್ರಸ್ತುತ ಸನ್ನಿವೇಶದಲ್ಲಿ ದಾಖಲಗುತ್ತಿರುವ ಹೊಸ ಸೋಂಕಿತರಿಗೆ ಅಷ್ಟೊಂದು ಬೆಡ್‍ಗಳು ಸಾಕಾಗುತ್ತಿಲ್ಲ. ಆ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಐಸಿಯೂಗೆ ಅನುಕೂಲ ಆಗುವಂತೆ ಹಾಗೂ ಸಾಮಾನ್ಯ ರೀತಿಯ ಇನ್ನೂ ಹೆಚ್ಚುವರಿ ಬೆಡ್‍ಗಳನ್ನು ಒದಗಿಸಬೇಕಾದ್ದು ಅತ್ಯಂತ ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲಿ 150 ಸಿಬ್ಬಂದಿಗಳ ನೇಮಕಾತಿಯನ್ನು ಕೈಗೊಳ್ಳಲಾಗಿತ್ತು. ಈಗ ಆ ಹುದ್ದೆಗಳು ಇಲ್ಲ. ಕೂಡಲೇ ಈಗಲಾದರೂ ಸಹ 150 ಸಿಬ್ಬಂದಿಗಳನ್ನು ಪುನರ್ ನೇಮಕ ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಗಣೇಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.